ಒಕ್ಕಲಿಗರ ಸಂಘ ದುಬೈ ವತಿಯಿಂದ ಅನಿವಾಸಿ ಗೌಡ ಸಮುದಾಯದವರಿಂದ ಇತ್ತೀಚೆಗೆ ಸ್ನೇಹ ಸಮ್ಮಿಲನ ಆಯೋಜಿಸಲಾಗಿತ್ತು.
- ದುಬೈನ ಒಕ್ಕಲಿಗರ ಸಂಘದಿಂದ ಸ್ನೇಹಸಮ್ಮಿಲನ
- ಕೌಶಲ ಅನಾವರಣಕ್ಕೆ ಸುಂದರ ವೇದಿಕೆ
ಹಾಸನ: ದುಬೈನ ಒಕ್ಕಲಿಗರ ಸಂಘದ ವತಿಯಿಂದ ಅನಿವಾಸಿ ಗೌಡ ಸಮುದಾಯದವರು ಸೇರಿಕೊಂಡು ಇತ್ತೀಚೆಗೆ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮ ಯಶಸ್ವಿಯಾಯಿತು.
ಯುಎಇ ಒಕ್ಕಲಿಗರ ಅಧಿಕೃತ ವೇದಿಕೆಯಾಗಿರುವ ಒಕ್ಕಲಿಗರ ಸಂಘ ದುಬೈನ ಈ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಿರ್ಮಲಾನಂದ ಸ್ವಾಮೀಜಿ ಆಶೀರ್ವಾದದೊಂದಿಗೆ ಪ್ರಾರಂಭವಾಯಿತು.
ಸಮುದಾಯದವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾ ಕಾರ್ಯಕ್ರಮಗಳು, ಮಕ್ಕಳ ಮನರಂಜನಾ ಕಾರ್ಯಕ್ರಮಗಳು ಆಕರ್ಷಕವಾಗಿ ನಡೆದವು. ಸಮುದಾಯದ ಹಲವು ಪ್ರತಿಭಾನ್ವಿತ ಮಕ್ಕಳ ಕೌಶಲ ಅನಾವರಣಕ್ಕೆ ಸುಂದರ ವೇದಿಕೆಯಾಯಿತು.
ಒಕ್ಕಲಿಗರ ಸಂಘದ ದುಬೈ ಅಧ್ಯಕ್ಷ ಕಿರಣ್ ಗೌಡ ಮಾತನಾಡಿ, ಮರುಭೂಮಿ ನಾಡು ಯುಎಇಯಲ್ಲಿರುವ ಎಲ್ಲ ಅನಿವಾಸಿ ಗೌಡ ಕುಲ ಬಾಂಧವರು ಒಂದೇ ಕುಟುಂಬದ ರೀತಿ ಒಗ್ಗಟ್ಟಿನಿಂದ ಪರಸ್ಪರ ಪ್ರೀತಿ ಗೌರವದಿಂದ, ಗೌಡ ಸಂಸ್ಕೃತಿಯನ್ನು ಹೆಮ್ಮೆಯಿಂದ ಪ್ರತಿನಿಧಿಸಬೇಕು ಎಂದರು. ದುಬೈನ ಒಕ್ಕಲಿಗರ ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ನಡೆಯಲಿರುವ ಹಲವು ಕಾರ್ಯಕ್ರಮಗಳ ಬಗ್ಗೆ ಬೆಳಕು ಚೆಲ್ಲಿದರು. ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಸಂಘದ ಪಾಲಕರಾದ ಹರೀಶ್ ಕೋಡಿ, ಉಪಾಧ್ಯಕ್ಷ ಪುಟ್ಟರಾಜು ಗೌಡ ಇತರರು ಇದ್ದರು.