ಬೇಲೂರು ತಾಲೂಕಿನ ಕೌರಿ ಗ್ರಾಮದ ಕಾಫಿ ತೋಟದಲ್ಲಿ ಮದವೇರಿದ ಎರಡು ಕಾಡಾನೆಗಳು ಒಂದಕ್ಕೊಂದು ಕಾದಾಟ ನಡೆಸಿದ ಸಂದರ್ಭ ಮರಗಳು ವಾಸದ ಮನೆ ಮೇಲೆಯೇ ಬಿದಿದ್ದರಿಂದ ಮನೆ ಜಖಂ ಗೊಂಡಿರುವುದು. ಮನೆ ಗೋಡೆ ಪಕ್ಕದಲ್ಲೆ ಕಾಡಾನೆ ತೆರಳುತ್ತಿರುವುದು.
- ತೋಟಗಾರಿಕೆ ಬೆಳೆಗಳ ಜತೆ ವಾಸದ ಮನೆಯೂ ಹಾನಿ
ಬೇಲೂರು: ತಾಲೂಕಿನ ಕೌರಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ವಾಸದ ಮನೆಯ ಸಮೀಪವೇ ಎರಡು ಕಾಡಾನೆಗಳು ಕಾದಾಟ ನಡೆಸಿದ್ದು, ಈ ವೇಳೆ ರೋಷಾವೇಶಕ್ಕೆ ಸಿಲುಕಿದ ಮರಗಳು ಸಮೀಪದ ಮನೆ ಮೇಲೆ ಉರುಳಿದೆ. ಪರಿಣಾಮ ಮನೆ ಭಾಗಶಃ ಹಾನಿಗೊಂಡಿದೆ.
ಬೇಲೂರು ತಾಲೂಕಿನ ಮಲೆನಾಡು ಭಾಗದ ವಿವಿಧ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಪೈಕಿ 30 ರಿಂದ 40ಕ್ಕೂ ಹೆಚ್ಚು ಕಾಡಾನೆಗಳು ತಾಲೂಕಿನ ಕೌರಿ ಗ್ರಾಮದ ಆಸುಪಾಸಿನಲ್ಲೇ ಬೀಡು ಬಿಟ್ಟಿವೆ. ಜತೆಗೆ ಸಮೀಪದ ತೋಟಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳ ಹಿಂಡು ಹಗಲು ರಾತ್ರಿ ಎನ್ನದೆ ಉಪಟಳ ನೀಡುತ್ತಿವೆ.
ಈ ಹಿಂಡಿನಿಂದ ಬೇರಾದ ಮದವೇರಿರುವ ಎರಡು ಆನೆಗಳು ಕೌರಿ ಗ್ರಾಮದ ವಾಸದ ಮನೆಗಳ ಸಮೀಪವೇ ಹಾಡ ಹಗಲೇ ಕಾದಾಟಕ್ಕಿಳಿದಿದ್ದು, ಈ ವೇಳೆ ತೋಟದಲ್ಲಿ ಸಿಕ್ಕ ಸಿಕ್ಕ ಗಿಡ, ಮರಗಳನ್ನೆಲ್ಲ ನೆಲಕ್ಕುರುಳಿಸಿವೆ. ದೊಡ್ಡ ಮರಗಳನ್ನು ಸೊಂಡಿಲಿನಿಂದ ತಳ್ಳಿ ಎದುರಿಗಿದ್ದ ಆನೆ ಹಾಗೂ ಪಕ್ಕದಲ್ಲಿದ್ದ ವಾಸದ ಮನೆ ಮೇಲೆ ಬೀಳಿಸಿದೆ.
ತೋಟದ ಬೆಳೆ ನಾಶದೊಂದಿಗೆ ಗ್ರಾಮದ ಪ್ರಸನ್ನ ಅವರ ಮನೆ ಜಖಂಗೊಂಡಿದೆ. ಮನೆಯ ಹೆಂಚುಗಳು, ಮರದ ವಸ್ತುಗಳು, ಮನೆಗೆ ಹೊಂದಿಕೊಂಡಿರುವ ಶೆಡ್ ಸಹ ಸಂಪೂರ್ಣ ನಾಶವಾಗಿದೆ.
ಭಾನುವಾರ ಬೆಳಗ್ಗೆ ಎರಡು ಕಾಡಾನೆಗಳು ಗುಂಪಿನಿಂದ ಬೇರಾಗಿ ಕಾದಾಟ ನಡೆಸಿವೆ. ಈ ಸಂದರ್ಭ ಬೆಳೆ ಹಾನಿಯಾಗಿದೆ. ಜತೆಗೆ ಮನೆ ಮೇಲೆಯೂ ಮರಗಳನ್ನು ಉರುಳಿಸಿರುವುದು ಕಂಡು ಬಂದಿದೆ. ಆದರೆ ಈಗ ಎರಡೂ ಕಾಡಾನೆಗಳು ಹಿಂಡಿನೊಂದಿಗೆ ಸೇರಿರುವುದರಿಂದ ಮತ್ತೆ ಯಾವುದೇ ಕಾದಾಟ ನಡೆಸಿಲ್ಲ. ಇವರತ್ತು ರಾತ್ರಿಯೇ ಅಲ್ಲಿನ ಆನೆಗಳನ್ನು ಕಾಡಿನತ್ತ ಓಡಿಸಲು ಮುಂದಾಗಲಿದ್ದೇವೆ. ಮತ್ತು ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.