ಕಣತೂರು ಗ್ರಾಮದಲ್ಲಿ ದೇವಿರಮ್ಮ ಮತ್ತು ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಅಂಗವಾಗಿ ದೇವರನ್ನು ವಿಶೇಷ ಅಲಂಕರಿಸಲಾಗಿತ್ತು.
ಆಲೂರು: ತಾಲೂಕಿನ ಕಣತೂರಲ್ಲಿ ಗ್ರಾಮದೇವತೆ ಶ್ರೀ ದೇವಿರಮ್ಮ ಮತ್ತು ವೀರಭದ್ರೇಶ್ವರ ಸ್ವಾಮಿ ಜಾತ್ರೆ, ಕೊಂಡೋತ್ಸವ, ಸಿಡಿ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಗಾಮದ ಮುತ್ತೈದೆಯರು ದೇವಿಯರಿಗೆ ಮಡಿಲಕ್ಕಿ ಕೊಟ್ಟ ನಂತರ ದೇವೀರಮ್ಮ ಮತ್ತು ವೀರಭದ್ರಸ್ವಾಮಿಯ ಉತ್ಸವ ನೆರವೇರಿತು. ರಾತ್ರಿಯಿಡೀ ಚೋಮ ದೇವರು ಕುಣಿತವನ್ನು ಭಕ್ತರು ಕಣ್ಣುಂಬಿಕೊಂಡರು. ಬಳಿಕ ಕರ್ಪೂರ ಹಚ್ಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಶನಿವಾರ ದೇವಾಸ್ಥಾನದ ಆವರಣದಲ್ಲಿ ದೇವರ ಮೂರ್ತಿಗಳಿಗೆ ವಿಶೇಷ ಪೂಜೆ ಮಾಡಿ ಪೂಜೆ ನಂತರ ದೇವಾಲಯದ ಮುಂಭಾಗ ಕೊಂಡೋತ್ಸವಕ್ಕೆ ಚಾಲನೆ ನೀಡಲಾಯಿತು. ಗ್ರಾಮದ ಯುವಕರು ದೇವರ ಅಡ್ಡೆಗಳನ್ನು ಹೊತ್ತು ಕೆಂಡ ತುಳಿದು ಭಕ್ತಿಪರವಶರಾದರು. ಕಣತೂರು ಗ್ರಾಮದ ಪಾಲಾಕ್ಷ ಅವರು ಮೂರು ದಿನಗಳಿಂದ ಉಪವಾಸ ವ್ರತ ಕೈಗೊಂಡು ಸಿಡಿ ಮಹೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಿದರು.
ನಾಕಲಗೂಡು, ಕುಂಬಾರಹಳ್ಳಿ, ಗೇಕರವಳ್ಳಿ, ತೊರಳ್ಳಿ, ಭಾವಸುವಳ್ಳಿ, ಸಿದ್ದಾಪುರ, ಕೋಡಿಗೆಹಳ್ಳಿ, ಹಳೇ ಆಲೂರು, ಮರಸು, ಗುಡ್ಡನಹಳ್ಳಿ, ತಾಳೂರು, ಚಿಕ್ಕಕಣಗಾಲು ಕಾರ್ಜುವಳ್ಳಿ, ಕಾಮತಿ, ವಲ್ಲಳ್ಳಿ ಸೇರಿದಂತೆ ಮುಂತಾದ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ದೇವೀರಮ್ಮ ಹಾಗೂ ವೀರಭದ್ರೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಆಲೂರು ಪೊಲೀಸ್ ಠಾಣೆ ವತಿಯಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ದೇವಾಸ್ಥಾನದ ತಡ ವತಿಯಿಂದ ನೆರೆದಿದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.