ಕಳೆದ 33 ವರ್ಷಗಳಿಂದ ಬಾಕಿ ಉಳಿದಿದ್ದ ಆಸ್ತಿ ಸಂಬಂಧಿತ ವ್ಯಾಜ್ಯಕ್ಕೆ ರಾಜೀ ಮೂಲಕ ಅಂತ್ಯ ಕಂಡಿದ್ದು, ಸಂಸಾರದಲ್ಲಿ ವಿರಸದಿಂದ ಬೇರ್ಪಟ್ಟಿದ್ದ ಅನೇಕ ಜೋಡಿಗಳು ಮತ್ತೆ ಒಂದಾಗಿರುವ ಹೃದಯಸ್ಪರ್ಶಿ ಘಟನೆಗಳು ಸೇರಿದಂತೆ ಇತರ ಪ್ರಕರಣಗಳು ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ನಡೆದಿವೆ
- ಲೋಕ ಅದಾಲತ್‌ನಲ್ಲಿ ಒಂದಾದ ದಂಪತಿಗಳು
- ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹೇಮಾವತಿ ಮಾಹಿತಿ ರಾಜೀ ಮೂಲಕ ವೈಮಸ್ಸು ಶಮನ
ಹಾಸನ: ಕಳೆದ 33 ವರ್ಷಗಳಿಂದ ಬಾಕಿ ಉಳಿದಿದ್ದ ಆಸ್ತಿ ಸಂಬಂಧಿತ ವ್ಯಾಜ್ಯಕ್ಕೆ ರಾಜೀ ಮೂಲಕ ಅಂತ್ಯ ಕಂಡಿದ್ದು, ಸಂಸಾರದಲ್ಲಿ ವಿರಸದಿಂದ ಬೇರ್ಪಟ್ಟಿದ್ದ ಅನೇಕ ಜೋಡಿಗಳು ಮತ್ತೆ ಒಂದಾಗಿರುವ ಹೃದಯಸ್ಪರ್ಶಿ ಘಟನೆಗಳು ಸೇರಿದಂತೆ ಇತರ ಪ್ರಕರಣಗಳು ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ನಡೆದಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹೇಮಾವತಿ ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ನಡೆಯುತ್ತಿದ್ದು, ಹಾಸನ ಜಿಲ್ಲೆಯಲ್ಲಿ ಸಹ ಯಶಸ್ವಿಯಾಗಿ ಆಯೋಜಿಸಲಾಗಿದೆ. 3ನೇ ಹೆಚ್ಚುವರಿ ಸತ್ರ ನ್ಯಾಯಾಲಯದಲ್ಲಿ ಸುಮಾರು 33 ವರ್ಷಗಳಿಂದ ಮುಂದುವರಿದಿದ್ದ ಆಸ್ತಿ ಸಂಬಂಧಿತ ಸಿವಿಲ್ ವ್ಯಾಜ್ಯವು ರಾಜೀ ಮೂಲಕ ಅಂತ್ಯಗೊಂಡಿದೆ ಎಂದು ಹೇಳಿದರು.
ನಗರದ ಹೃದಯಭಾಗದಲ್ಲಿರುವ ಆಸ್ತಿಗೆ ಸಂಬಂಧಿಸಿದ ಈ ವಿವಾದದಲ್ಲಿ ಒಟ್ಟು 26 ಜನ ಭಾಗಿಯಾಗಿದ್ದು, ವಕೀಲರು, ಆತ್ಮೀಯರು ಹಾಗೂ ನ್ಯಾಯಾಧೀಶರ ಸಮ್ಮುಖದಲ್ಲಿ ಪರಸ್ಪರ ಚರ್ಚೆ ನಡೆಸಿ ಒಮ್ಮತಕ್ಕೆ ಬಂದು ಪ್ರಕರಣಕ್ಕೆ ಅಂತ್ಯವಾಡಲಾಗಿದೆ. ಇದರಿಂದ ಮುಂದಿನ ಜೀವನವನ್ನು ಶಾಂತಿಯುತವಾಗಿ ಸಾಗಿಸಲು ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಸಂಸಾರದಲ್ಲಿ ಬೇರ್ಪಟ್ಟಿದ್ದ ದಂಪತಿಗಳು ರಾಜೀ ಮಾಡಿಕೊಂಡು ಮತ್ತೆ ಒಂದಾಗಿ ಕುಟುಂಬ ಜೀವನಕ್ಕೆ ಮರಳಿದ್ದಾರೆ. ಇನ್ನು ಹಲವಾರು ನಾಗರಿಕ ಮತ್ತು ಇತರ ಪ್ರಕರಣಗಳು ಲೋಕ ಅದಾಲತ್‌ನಲ್ಲಿ ಇತ್ಯಾರ್ಥಗೊಂಡಿದ್ದು, ಪಕ್ಷಕಾರರು ಸಂತೃಪ್ತಿಯಿಂದ ನ್ಯಾಯಾಲಯದಿಂದ ತೆರಳಿದ್ದಾರೆ ಎಂದು ತಿಳಿಸಿದರು. ಇದೇ ರೀತಿಯಲ್ಲಿ ಹಳೆಯ ಹಾಗೂ ದೀರ್ಘಕಾಲ ಬಾಕಿ ಉಳಿದಿರುವ ವ್ಯಾಜ್ಯಗಳನ್ನು ರಾಜೀ ಮೂಲಕ ಬಗೆಹರಿಸಿಕೊಂಡರೆ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಲಿದೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ರಾಜೀ ಸಂಧಾನಕ್ಕೆ ನಾಂದಿ ಆಗಲಿವೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಕೆ. ದಾಕ್ಷಾಯಿಣಿ ಸೇರಿದಂತೆ ಇತರ ನ್ಯಾಯಾಧೀಶರು ಹಾಗೂ ವಕೀಲರು ಉಪಸ್ಥಿತರಿದ್ದರು.