ಅರಕಲಗೂಡು ನ್ಯಾಯಾಲಯ ಆವರಣದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಿತು. 
ಹಾಸನ

ಲೋಕ ಅದಾಲತ್‌ನಲ್ಲಿ 263 ಪ್ರಕರಣಗಳು ಇತ್ಯರ್ಥ

ಅರಕಲಗೂಡು: ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಒಟ್ಟು 263 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.
ಒಟ್ಟು ನಾಲ್ಕು ನ್ಯಾಯಾಲಯಗಳಲ್ಲಿ ಒಟ್ಟು 9,543 ಪ್ರಕರಣಗಳು ಇದ್ದು, ಈ ಪೈಕಿ 554 ಪ್ರಕರಣಗಳನ್ನು ರಾಷ್ಟ್ರೋಯ ಲೋಕ ಅದಾಲತ್‌ಗೆ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಇವುಗಳಲ್ಲಿ 263 ಪ್ರಕರಣಗಳು ಉಭಯ ಪಕ್ಷಗಳ ಪರಸ್ಪರ ಒಪ್ಪಿಗೆಯ ಮೇರೆಗೆ ರಾಜಿ ಸಂಧಾನದ ಮೂಲಕ ಯಶಸ್ವಿಯಾಗಿ ತ್ವರಿತ ನ್ಯಾಯ ದೊರಕಿದಂತಾಯಿತು.
ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ 75 ಪ್ರಕರಣಗಳು, ಮೊದಲನೇ ಅಧಿಕ ನ್ಯಾಯಾಲಯದಲ್ಲಿ 75 ಪ್ರಕರಣಗಳು, ಎರಡನೇ ಅಧಿಕ ನ್ಯಾಯಾಲಯದಲ್ಲಿ 22 ಪ್ರಕರಣಗಳು, ಹಾಗೂ ಹಿರಿಯ ಸಿವಿಲ್ ನ್ಯಾಯಾಲಯ 91 ಪ್ರಕರಣಗಳು ರಾಜಿ ಸಂದಾನ ಮೂಲಕ ಇತ್ಯರ್ಥಗೊಂಡವು.
ಈ ಕುರಿತು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಜಿ.ಲೋಕೇಶ್ ಮಾತನಾಡಿ, ರಾಷ್ಟ್ರೀಯ ಲೋಕ ಅದಾಲತ್ ವರ್ಷಗಳ ಕಾಲ ಬಾಕಿ ಉಳಿಯುವ ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲು ಪರಿಣಾಮಕಾರಿ ವೇದಿಕೆಯಾಗಿದೆ. ಇದರಿಂದ ಸಮಯ ಹಾಗೂ ಹಣದ ಉಳಿತಾಯದ ಜತೆಗೆ ಉಭಯ ಪಕ್ಷಗಳಿಗೂ ಶಾಶ್ವತ ಪರಿಹಾರ ದೊರೆಯುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಲೋಕ ಅದಾಲತ್‌ನ ಸೌಲಭ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರು, ವಕೀಲರು, ನ್ಯಾಯಾಲಯ ಸಿಬ್ಬಂದಿ ಹಾಗೂ ಪ್ರಕರಣಗಳ ಪಕ್ಷಕಾರರು ಭಾಗವಹಿಸಿ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಿದರು.