ಬೇಲೂರು ತಾಲೂಕಿನ ದೇವಿಹಳ್ಳಿ ಗ್ರಾಮದ ಶ್ರೀಮೆಣಸಿನಮ್ಮ ದೇವಾಲಯದ 25ನೇ ವರ್ಷದ ವಾರ್ಷಿಕ ಪೂಜೆ ಹಾಗೂ ದೇಗುಲದ ಮಹಾದ್ವಾರದ 8ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ದೇಗುಲವನ್ನು ಅಲಂಕರಿಸಿರುವುದು.
- ಮೆಣಸಿನಮ್ಮ ದೇವಾಲಯದ 25ನೇ ವರ್ಷದ ಪೂಜೆ
ಬೇಲೂರು : ತಾಲೂಕಿನ ಯಲಹಂಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಿಹಳ್ಳಿ ಗ್ರಾಮದ ಮೆಣಸಿನಮ್ಮ ದೇವಾಲಯದ 25ನೇ ವರ್ಷದ ಪೂಜೆ ಹಾಗೂ ದೇಗುಲದ ಮಹಾದ್ವಾರದ 8ನೇ ವಾರ್ಷಿಕೋತ್ಸವವನ್ನು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಅದ್ದೂರಿಯಾಗಿ ನೆರವೇರಿಸಲಾಯಿತು.
ಪೂಜಾ ಕಾರ್ಯಕ್ರಮದ ಅಂಗವಾಗಿ ಮೆಣಸಿನಮ್ಮ ದೇವಾಲಯದಲ್ಲಿ ದೇವಿಗೆ ಗಂಗಾಸ್ನಾನ, ಪಂಚಾಮೃತಾಭಿಷೇಕ, ಚಂಡಿಕಾ ಹೋಮ, ಗಣ ಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಬೆಳಗ್ಗಿನಿಂದಲೇ ಭಕ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.
ಶ್ರೀ ಮೆಣಸಿನಮ್ಮ ದೇವಾಲಯದ 25ನೇ ವರ್ಷದ ವಾರ್ಷಿಕ ಪೂಜೆ ಹಾಗೂ ದೇಗುಲದ ಮಹಾದ್ವಾರದ 8ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ದೇಗುಲದಲ್ಲಿ ದೇವರನ್ನು ಪೂಜಿಸಿರುವುದು.
ಟ್ರಸ್ಟ್ ಅಧ್ಯಕ್ಷ ಈಶ್ವರಪ್ಪ ಹಾಗೂ ಧರ್ಮದರ್ಶಿ ಭ್ರಮೇಶ್, ನಮ್ಮ ಪೂರ್ವಿಕರ ಕಾಲದಿಂದಲೇ ಈ ಮೆಣಸಿನಮ್ಮ ದೇವಿ ಇಲ್ಲಿ ನೆಲೆಸಿದ್ದು, ವಿಶೇಷ ಪೂಜೆ, ಕೊಂಡ ಸೇವೆ, ಸಿಡಿ ಉತ್ಸವಗಳನ್ನು ಆಚರಿಸುತ್ತಾ ಬಂದಿದ್ದೇವೆ. ಗದ್ದುಗೆಯಲ್ಲಿದ್ದ ದೇವಿಗೆ ಸುತ್ತಮುತ್ತಲ ಏಳು ಗ್ರಾಮಸ್ಥರ ಹಾಗೂ ಭಕ್ತರ ಸಹಕಾರದಿಂದ 25 ವರ್ಷಗಳ ಹಿಂದೆ ದೇವಾಲಯ ನಿರ್ಮಿಸಲಾಗಿದೆ. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಪೂಜೆ ಸಲ್ಲಿಸುತ್ತಾ ಬಂದಿದ್ದೇವೆ. ದೇವಿಯೂ ಅತ್ಯಂತ ಶಕ್ತಿಶಾಲಿ ಹಾಗೂ ಸಂತಾನ ಭಾಗ್ಯವಿಲ್ಲದ ದಂಪತಿಗಳು ಉಡಿ ಸೇವೆ ಸಲ್ಲಿಸಿದರೆ ಸಂತಾನ ಪ್ರಾಪ್ತಿಯಾಗಿರುವ ಸಾಕಷ್ಟು ನಿದರ್ಶನಗಳಿವೆ. ಸಣ್ಣಪುಟ್ಟ ದೋಷಗಳಿದ್ದರೆ ಜಾತ್ರೆಯ ದಿನ ಮೆಣಸು ಅರ್ಪಿಸಿದರೆ ಕಷ್ಟಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ ಎಂದರು.
ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ನಾನು ಸಹ ಈ ತಾಯಿಯ ಭಕ್ತನಾಗಿದ್ದೇನೆ. ಸುತ್ತಮುತ್ತಲಿನ ಏಳು ಗ್ರಾಮಗಳ ಭಕ್ತರು ಜಾತಿ-ಮತ ಭೇದವಿಲ್ಲದೆ ಒಂದಾಗಿ ಸೌಹಾರ್ದತೆಯಿಂದ ಪೂಜೆ ಸಲ್ಲಿಸುತ್ತಿದ್ದಾರೆ. ಯಾವುದೇ ಕಷ್ಟ-ಹರಕೆಗಳಿದ್ದರೂ ತಾಯಿ ನೆರವೇರಿಸುತ್ತಾಳೆ ಎಂಬ ಭಕ್ತರ ನಂಬಿಕೆ ಇದೆ. ನಾನು ಶಾಸಕನಾಗಿದ್ದಾಗ ದೇಗುಲಕ್ಕೆ ಮೂಲ ಸೌಕರ್ಯ ಒದಗಿಸಿದ್ದೇನೆ. ಮುಂದೆಯೂ ಸಹಕಾರ ನೀಡುತ್ತೇನೆ ಎಂದರು.
ಗ್ರಾಮಸ್ಥರಾದ ಪಟೇಲ್ ಹರೀಶ್, ಚನ್ನೇಗೌಡ, ಅಣ್ಣಪ್ಪಶೆಟ್ಟಿ, ಸುನೀಲ್ ಕುಮಾರ್ ರಾಜೇಶ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತರಿದ್ದರು.