ಹೊಳೆನರಸೀಪುರ: ಮಾರ್ಚ್ 18ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ತಾಲೂಕಿನ 9 ಪರೀಕ್ಷಾ ಕೇಂದ್ರಗಳಲ್ಲಿ 2,213 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್.ಸೋಮಲಿಂಗೇಗೌಡ ಹೇಳಿದರು.
ತಾಲೂಕಿನಲ್ಲಿ 1,096 ಬಾಲಕರು, 1,117 ಬಾಲಕಿಯರು ಪರೀಕ್ಷೆ ಬರೆಯಲು ನೋಂದಾಯಿಸಿದ್ದಾರೆ. ಇವರಲ್ಲಿ 2,080 ಹೊಸ ಅಭ್ಯರ್ಥಿಗಳು, 87 ಪುನರಾವರ್ತಿತ ಅಭ್ಯರ್ಥಿಗಳು, ಖಾಸಗಿಯಾಗಿ 46 ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ತಾಲೂಕು ಕೇಂದ್ರದಲ್ಲಿ ಮೂರು ಹಾಗೂ ಗ್ರಾಮೀಣ ಭಾಗದ ಆರು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪ್ರಥಮ ಚಿಕಿತ್ಸೆ ಹಾಗೂ ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಪರೀಕ್ಷಾ ಕೇಂದ್ರಗಳಿಗೆ ಅಂತರ್ ಕ್ಲಸ್ಟರ್‌ಗಳಿಂದ ಪ್ರೌಢಶಾಲಾ ಸಹ ಶಿಕ್ಷಕರನ್ನು ಕೊಠಡಿಯ ಮೇಲ್ವಿಚಾರಕರನ್ನಾಗಿ ನಿಯೋಜನೆ ಮಾಡಲಾಗಿದ್ದು ಅವರಿಗೆ ಮೇಲ್ವಿಚಾರಕರ ಕರ್ತವ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ತರಬೇತಿ ನೀಡಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಪ್ರತಿದಿನ ಒಬ್ಬ ಸ್ಥಾನಿಕ ಜಾಗೃತ ದಳ ಸಿಬ್ಬಂದಿ, ಮೊಬೈಲ್ ಸ್ವಾಧೀನ ಅಧಿಕಾರಿಗಳನ್ನು ನೇಮಿಸಲಾಗಿದ್ದು ಪ್ರತಿದಿನ ಒಬ್ಬರು ಪರೀಕ್ಷಾ ಕೇಂದ್ರದಲ್ಲಿಯೇ ಹಾಜರಿರುವ ಮೂಲಕ ಪರೀಕ್ಷೆ ಸುಸೂತ್ರವಾಗಿ ನಡೆಯಲು ವ್ಯವಸ್ಥೆ ಮಾಡಲಾಗಿದೆ. ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು ಕುಡಿಯುವ ನೀರು, ಶೌಚಗೃಹ, ಆಸನದ ವ್ಯವಸ್ಥೆಗಳನ್ನು ಒದಗಿಸಲಾಗಿದೆ. ಉತ್ತರ ಪತ್ರಿಕೆಗಳನ್ನು ಹಾಗೂ ಪರೀಕ್ಷಾ ಗೌಪ್ಯ ಸಾಮಗ್ರಿಗಳನ್ನು ಎಲ್ಲ ಪರೀಕ್ಷಾ ಕೇಂದ್ರಗಳಿಗೆ ವಿತರಿಸಲಾಗಿದೆ. ಪರೀಕ್ಷಾ ಮಂಡಳಿಯಿಂದ ಪ್ರಶ್ನೆ ಪತ್ರಿಕೆಗಳು ಈಗಾಗಲೇ ಸರಬರಾಜಾಗಿದ್ದು ತಾಲೂಕು ಉಪ ಖಜಾನೆಯಲ್ಲಿ ಭದ್ರವಾಗಿವೆ ಎಂದು ಹೇಳಿದರು.
ಕಳೆದ ಸಾಲಿನಲ್ಲಿ ಶೇ.75.26 ಫಲಿತಾಂಶ ಬಂದಿದ್ದು ಈ ಸಾಲಿನಲ್ಲಿ ಶೇ.100 ಫಲಿತಾಂಶ ಬರುವ ನಿರೀಕ್ಷೆ ಇದೆ. ಜೂನ್‌ನಿಂದಲೇ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಮಾರ್ಗದರ್ಶನ ನೀಡಲಾಗಿದೆ. ವಿದ್ಯಾರ್ಥಿಗಳು ಭಯರಹಿತವಾಗಿ ಪರೀಕ್ಷೆ ಎದುರಿಸಲು ಸೂಕ್ತ ಮಾರ್ಗದರ್ಶನ ನೀಡಲಾಗಿದೆ. ಪರೀಕ್ಷೆ ನಡೆಸಲು ಎಲ್ಲ ಅಗತ್ಯಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಹಾಯವಾಣಿ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.