- ಶುಂಠಿ ಕೆಲಸಕ್ಕೆ ಕರೆತಂದು ಕೂಡಿಹಾಕಿದ್ದ ಇಬ್ಬರ ಬಂಧನ
ಹಳೇಬೀಡು: ಹೋಬಳಿಯ ಚಟ್ನಹಳ್ಳಿ ಸಮೀಪದ ಮಲೆಯಪ್ಪನ ಕೊಪ್ಪಲು ಗ್ರಾಮಕ್ಕೆ ಕೂಲಿ ಕೆಲಸಕ್ಕೆಂದು ನೆರೆ ರಾಜ್ಯ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬಂದು ಮಾಲೀಕರಿಂದ ಬಂಧನಕ್ಕೊಳಪಟ್ಟು ಹಿಂಸೆ ಅನುಭವಿಸುತ್ತಿದ್ದ 18 ಕಾರ್ಮಿಕರನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪೊಲೀಸ್ ಸಹಕಾರದೊಂದಿಗೆ ಜೀತಮುಕ್ತಗೊಳಿಸಿದ್ದಾರೆ.
ಗ್ರಾಮದ ಶುಂಠಿ ಹೊಲದಲ್ಲಿ ಕೆಲಸ ಮಾಡಲು 18 ಕಾರ್ಮಿಕರನ್ನು ವಿವಿಧ ಜಿಲ್ಲೆ ಹಾಗೂ ನೆರೆ ರಾಜ್ಯಗಳಿಂದ ಕರೆತಂದಿದ್ದ ಮುನೇಶ ಹಾಗೂ ನಾಗರಾಜು ಎಂಬವರು ಕಾರ್ಮಿಕರಿಂದ ಕೆಲಸ ಮಾಡಿಸಿಕೊಂಡಿದ್ದಾರೆ. ಹೆಚ್ಚಿನ ಹಣದ ಆಸೆ ತೋರಿಸಿ ಬೇರೆಯವರು ಕರೆದೊಯ್ಯುತ್ತಾರೆ ಎಂಬ ಕಾರಣಕ್ಕೆ ಕಾರ್ಮಿಕರನ್ನು ಹೊರಗೆ ಬಿಡದೆ ಊಟ/ತಿಂಡಿಯನ್ನೂ ಸರಿಯಾಗಿ ಕೊಡದೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸಿಸಿದ್ದಾರೆ. ಇದರಿಂದ ಭೀತಿಗೊಳಗಾಗಿದ್ದ ಕಾರ್ಮಿಕರು ಗುರುವಾರ ಸ್ಥಳೀಯರೊಬ್ಬರ ಸಹಕಾರ ಪಡೆದು, ತಾಲೂಕು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಕೂಡಲೇ ಕಾರ್ಯೋನ್ಮುಖರಾದ ಅಧಿಕಾರಿ ಲಿಂಗರಾಜು ಹಳೇಬೀಡು ಠಾಣಾಧಿಕಾರಿ ಮಂಜುನಾಥ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದಾಗ, ಶೆಡ್ ಮುಂದೆ ಕಾವಲು ಕಾಯುತ್ತಿದ್ದ ಮುನೇಶ ಮತ್ತು ನಾಗರಾಜು ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ 18 ಸಂತ್ರಸ್ತರನ್ನು ಹಳೇಬೀಡಿಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ಹೇಳಿಕೆ ಪಡೆಯಲಾಗಿದೆ. ಪ್ರಸ್ತುತ ಪರಾರಿಯಾಗಿದ್ದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.