ಬೇಲೂರು ತಾಲೂಕಿನ ಹನಿಕೆ ಸಂತೆ ಗ್ರಾಮದ ಸಮೀಪ ಅಕ್ರಮವಾಗಿ ಕೂಡಿಟ್ಟಿದ್ದ ಗೋವುಗಳನ್ನು ವಾಹನಗಳ ಮೂಲಕ ಗೋ ಶಾಲೆಗೆ ಕಳುಹಿಸುತ್ತಿರುವುದು 
ಹಾಸನ

ಹನಿಕೆ ಸಂತೆ ಗ್ರಾಮದಲ್ಲಿ 17 ಗೋವುಗಳ ರಕ್ಷಣೆ

ಪ್ರಮುಖ ಮುಖ್ಯಾಂಶಗಳು

  • ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಮುಖಂಡರ ಕಾರ್ಯಾಚರಣೆ
  • ಅಧಿಕೃತ ದಾಖಲೆಗಳಿಲ್ಲದೆ ಸಾಗಣೆ ಹಿನ್ನೆಲೆ
ಬೇಲೂರು: ತಾಲೂಕಿನ ಹನಿಕೆ ಸಂತೆ ಗ್ರಾಮದ ಎಪಿಎಂಸಿ ಕಟ್ಟಡದ ಆವರಣದಿಂದ ಅಕ್ರಮವಾಗಿ ಗೋವುಗಳನ್ನು ಸಾಗಣೆ ಮಾಡಲು ಯತ್ನಿಸುತ್ತಿದ್ದ ಸಂದರ್ಭ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಮುಖಂಡರು ಮಧ್ಯೆಪ್ರವೇಶಿಸಿ 17 ಗೋವುಗಳನ್ನು ರಕ್ಷಿಸಿ ಗೋ ಶಾಲೆಗೆ ಸಾಗಿಸಲಾಯಿತು.
ಆವರಣದಲ್ಲಿ ಗೋವುಗಳನ್ನು ಒಂದೇ ಸ್ಥಳದಲ್ಲಿ ಅನುಮಾನಾಸ್ಪದವಾಗಿ ಇಟ್ಟು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲು ಸಿದ್ಧತೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಮುಖಂಡರು ಗೋವುಗಳನ್ನು ವಶಕ್ಕೆ ಪಡೆದರು. ಈ ಸಂದರ್ಭ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಗೋವುಗಳನ್ನು ಸಾಗಿಸಲು ಪ್ರಯತ್ನಿಸುತ್ತಿರುವುದು ತಿಳಿಯಿತು.
ನಂತರ ಕಾರ್ಯಕರ್ತರು ಗೋವುಗಳನ್ನು ಬಿಡುಗಡೆಗೊಳಿಸಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದರು. ಘಟನೆಯ ಮಾಹಿತಿ ತಿಳಿದ ಸ್ಥಳೀಯರೂ ಸ್ಥಳಕ್ಕೆ ಆಗಮಿಸಿ ಸಹಕಾರ ನೀಡಿದರು. ಕೆಲ ಕಾಲ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನವಾದರೂ ಶಾಂತವಾಯಿತು. ರಕ್ಷಿಸಲಾದ ಎಲ್ಲ 17 ಗೋವುಗಳನ್ನು ಅರಸೀಕೆರೆ ಸಮೀಪದ ಕಸ್ತೂರಬಾ ಗೋ ಶಾಲೆಗೆ ವಾಹನಗಳಲ್ಲಿ ಸಾಗಿಸಲಾಯಿತು.
ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅಕ್ರಮ ಗೋ ಸಾಗಣೆ ಜಾಲದ ಕುರಿತು ತನಿಖೆ ಪ್ರಾರಂಭವಾಗಿದೆ. ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಪೊಲೀಸರನ್ನು ಆಗ್ರಹಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ನಗರಾಧ್ಯಕ್ಷ ಭರತ್ ಬಿರಡಹಳ್ಳಿ ಮಾತನಾಡಿ, ಗೋವುಗಳನ್ನು ಅಕ್ರಮವಾಗಿ ಸಾಗಿಸುವುದು ಕಾನೂನು ಬಾಹಿರ. ಇಂತಹ ಚಟುವಟಿಕೆಗಳನ್ನು ನಾವು ಸಹಿಸುವುದಿಲ್ಲ. ಮುಂದೆಯೂ ಇಂತಹ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಮ್ಮ ಸಂಘಟನೆ ಸದಾ ಸಿದ್ಧವಾಗಿದೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.
ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಮುಖಂಡರು ಇದ್ದರು.