ಹೊಳೆನರಸೀಪುರ ತಾಲೂಕಿನ ಬಲಿಜ ಸಂಘದ ವತಿಯಿಂದ ಶ್ರೀವೀರಾಂಜನೇಯ ಸ್ವಾಮಿ ವ್ರತ ಆಚರಣೆ ಹಿನ್ನೆಲೆಯಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಹೊಳೆನರಸೀಪುರ: ಪಟ್ಟಣದ ಹಳೇ ಅಂಚೆ ಬೀದಿ ಶ್ರೀವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ತಾಲೂಕು ಬಲಿಜ ಸಂಘದ ವತಿಯಿಂದ 16ನೇ ವರ್ಷದ ಶ್ರೀವೀರಾಂಜನೇಯಸ್ವಾಮಿ ವ್ರತದ ಅಂಗವಾಗಿ ಶ್ರೀಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು, ಬೆಳಗ್ಗೆ ಶಾಸಕ ಎಚ್.ಡಿ.ರೇವಣ್ಣ ಅವರ ಉಪಸ್ಥಿತಿಯಲ್ಲಿ ಸ್ವಾಮಿಗೆ ವಿಶೇಷ ಪಂಚಾಮೃತ ಅಭಿಷೇಕ ನೆರವೇರಿತು.
ಮಂಗಳವಾರ ಶ್ರೀವೀರಾಂಜನೇಯಸ್ವಾಮಿಗೆ ವಿಶೇಷ ಅಲಂಕಾರ ಮತ್ತು ಪೂಜಾ ಕೈಂಕರ್ಯ ಹಾಗೂ ಮಹಾ ಮಂಗಳಾರತಿ ನೆರವೇರಿತು. ಮಧ್ಯಾಹ್ನ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಸಂಜೆ ಮಾರುತಿ ಭಜನಾ ಮಂಡಳಿ ಹಾಗೂ ಪೂರ್ಣಶ್ರೀ ಕಲಾ ಕೇಂದ್ರ ಹೊಳೆನರಸೀಪುರ ಇವರ ವತಿಯಿಂದ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ರಾತ್ರಿ ದೀಪೋತ್ಸವ ನಡೆಸಲಾಯಿತು.ಪೂಜಾ ಕೈಂಕರ್ಯಗಳನ್ನು ಅರ್ಚಕ ಎಚ್.ವಿ.ಸುಜಯ ಆಚಾರ್ ನಡೆಸಿಕೊಟ್ಟರು.
ಹನುಮದ್ ವ್ರತ ಕಾರ್ಯಕ್ರಮಗಳನ್ನು ತಾಲೂಕು ಬಲಿಜ ಸಂಘದ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು, ಶ್ರೀಮಾರುತಿ ಸ್ವ ಸಹಾಯ ಸಂಘದ ಅಧ್ಯಕ್ಷರು, ಸದಸ್ಯರ ಸಹಭಾಗಿತ್ವದಲ್ಲಿ ನಡೆಸಲಾಯಿತು.
ಕಾಂಗ್ರೆಸ್ ನಾಯಕಿ ಅನುಪಮಾ ಮಹೇಶ್, ರಾಷ್ಟ್ರೀಯ ಪತ್ರಿಕಾ ಮಂಡಳಿ ಸದಸ್ಯ ಎಚ್.ವಿ.ಸುರೇಶ್‌ಕುಮಾರ್, ಪುರಸಭೆ ನಿವೃತ್ತ ಮುಖ್ಯಾಧಿಕಾರಿ ಶಾಂತಶೆಟ್ಟಿ, ತಾಲೂಕು ಬಲಿಜ ಜನಾಂಗದ ಅಧ್ಯಕ್ಷ ಎಚ್.ಜಿ.ವೆಂಕಟೇಶ್, ಕಾರ್ಯದರ್ಶಿ ನಾರಾಯಣಸ್ವಾಮಿ, ಶಂಕರ್,ಮತ್ತು ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು.