ಚನ್ನರಾಯಪಟ್ಟಣದಲ್ಲಿ ಆಯೋಜಿಸಿದ್ದ ಜನಸ್ಪಂದನಾ ಹಾಗೂ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ಸಮಸ್ಯೆ ಆಲಿಸುತ್ತಿರುವ ಸಚಿವ ಕೃಷ್ಣ ಬೈರೇಗೌಡ ಹಾಗೂ ಅಧಿಕಾರಿಗಳು. 
ಹಾಸನ

ಸಕಾಲದಲ್ಲಿ ಅರ್ಜಿ ವಿಲೇವಾರಿಯಾಗಲಿ

ಚನ್ನರಾಯಪಟ್ಟಣ: ಕಾನೂನು ಚೌಕಟ್ಟಿನಲ್ಲಿ ಅರ್ಜಿಗಳನ್ನು ನಿಗದಿತ ಸಮಯದಲ್ಲಿ ವಿಲೇವಾರಿ ಮಾಡಲು ಕ್ರಮ ವಹಿಸುವಂತೆ ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಜನಸ್ಪಂದನಾ ಹಾಗೂ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಸಚಿವರು ಮಾತನಾಡಿದರು.

ಎಲ್ಲ ಅರ್ಜಿಗಳಿಗೂ ಒಂದೇ ರೂಪದಲ್ಲಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದ ಸಚಿವರು, ಬೋರವೆಲ್‌ಗೆ ಸಂಬಂಧಿಸಿದ ಸಮಸ್ಯೆ ಶಾಸಕರ ವ್ಯಾಪ್ತಿಗೆ ಬರುತ್ತದೆ, ಮನೆ ಮಂಜೂರು ಗ್ರಾಮ ಪಂಚಾಯಿತಿ ಸಮಿತಿಗೆ ಬರುತ್ತದೆ. ಸ್ವೀಕೃತವಾದ ಇಂತಹ ಅರ್ಜಿಗಳನ್ನು ಸಂಬಂಧಿಸಿದವರಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಸ್ವೀಕಾರವಾದ ಅರ್ಜಿಗಳಲ್ಲಿ ಸಾಧ್ಯವಿರುವ ಕೆಲವು ಅರ್ಜಿಗಳಿಗೆ ಸ್ಥಳದಲ್ಲಿ ಪರಿಹಾರ ಒದಗಿಸಲಾಗುತ್ತದೆ. ಉಳಿದವುಗಳ ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡಿ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅರ್ಜಿಗಳನ್ನು ಸ್ವೀಕರಿಸಿ ಸ್ಥಳೀಯ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹಾರಕ್ಕೆ ಪ್ರಯತ್ನಿಸಲು ಸಹಕಾರಿ ಆಗುತ್ತದೆ ಎಂದು ಸಚಿವರು ತಿಳಿಸಿದರು.

ಕಾನೂನು ಚೌಕಟ್ಟಿನಲ್ಲಿರವುದನ್ನು ಪರಿಹಾರ ಮಾಡಲಾಗುವುದು, ಉಳಿದ ಸಮಸ್ಯೆಗಳನ್ನು ಬಗೆಹರಿಸಲು ಸಮಯ ತೆಗೆದುಕೊಳ್ಳುತ್ತದೆ. ಪರಿಹಾರ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಹೆಚ್ಚು ಅರ್ಜಿಗಳು ದುರಸ್ತಿಗೆ ಸಂಬಂಧಿಸಿದಂತೆ ಬರುತ್ತವೆ. ಕಳೆದ ಐದು ವರ್ಷಗಳಲ್ಲಿ ಕೇವಲ 500 ಪ್ರಕರಣ ದುರಸ್ತಿ ಮಾಡಲಾಗಿದೆ. 2025ರಲ್ಲಿ 25000 ಪ್ರಕರಣ ದುರಸ್ತಿಗೆ ಕ್ರಮ ವಹಿಸಿದ್ದು, ಈಗಾಗಲೇ 13-14 ಸಾವಿರ ಪ್ರಕರಣಗಳು ದುರಸ್ತಿ ಮಾಡಲಾಗಿದೆ ಎಂದು ತಿಳಿಸಿದರು.
ನಕಾಶೆಯಲ್ಲಿ ರಸ್ತೆ ಇದ್ದರೆ ಮುಲಾಜಿಲ್ಲದೆ ತೆರವುಗೊಳಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ದುರಸ್ತಿಯಾದ ನಂತರ ಇಂಡೀಕರಣ ಆಗಬೇಕು, ಇದರ ಬಗ್ಗೆ ಅರ್ಜಿಗಳು ಬರುತ್ತಿವೆ. ಇವುಗಳ ಬಗ್ಗೆ ಹೆಚ್ಚಿನ ಗಮನಹರಿಸಿ ಪಟ್ಟಿಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ವಸತಿ ಪ್ರದೇಶಗಳಿಗೆ ಕುರಿತಂತೆ ದಾಖಲೆ ಇರುವುದು ಮತ್ತು ಇಲ್ಲದಿರುವ ಬಗ್ಗೆ ತಹಸೀಲ್ದಾರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಪರಿಶೀಲನೆ ಮಾಡಬೇಕು. ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಸ್ಥಾನದ ಜಾಗ ಬಂದುಬಸ್ತು ಮಾಡಿಸಲು ಕ್ರಮ ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕರು ಖುದ್ದು ಹಾಜರಾಗಿ ಮನವಿಗಳನ್ನು ನೀಡಲು ತೆರೆಯಲಾದ ಕೌಂಟರ್‌ಗಳಲ್ಲಿ ಅರ್ಜಿಗಳನ್ನು ದಾಖಲಿಸಿಕೊಂಡು ಟೋಕನ್ ನಂಬರ್‌ಗಳನ್ನು ಸ್ವೀಕರಿಸಿ ತಮ್ಮ ಅಹವಾಲನ್ನು ಸಲ್ಲಿಸಿದರು. ಒಟ್ಟು 786 ಅರ್ಜಿಗಳನ್ನು ಸ್ವೀಕರಿಸಲಾಯಿತು. ಸಂಸದ ಶ್ರೇಯಸ್ ಎಂ.ಪಟೇಲ್, ಶಾಸಕ ಸಿ.ಎನ್. ಬಾಲಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಜಿಲ್ಲಾಧಿಕಾರಿ ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ, ತಹಸೀಲ್ದಾರ್ ಜಿ.ಎಸ್. ಶಂಕರಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಬ್ ಕುಮಾರ್, ಅಪರ ಜಿಲ್ಲಾಧಿಕಾರಿ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ಹೆಚ್ಚುವರಿ ಪೊಲೀಸ್ ವರಿಷ್ಠ ಅಧಿಕಾರಿ ತಮ್ಮಯ್ಯ, ಉಪ ವಿಭಾಗಾಧಿಕಾರಿಗಳಾದ ಜಗದೀಶ್ ಗಂಗಣ್ಣನವರ್, ರಾಜೇಶ್ ಕೆಡಿಪಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.