ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ ಕೆಲವು ವರ್ಷಗಳಿಂದ ಕೃಷಿ ಜಮೀನುಗಳ ಪೋಡಿ ದುರಸ್ತಿಗೆ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರೂ ಇದೂವರೆಗೆ ಜಾಗದ ದುರಸ್ತಿ ಮಾಡಿಲ್ಲ ಎಂದು ಆರೋಪಿಸಿ ರೈತರು ಪಟ್ಟಣದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಸೋಮವಾರಪೇಟೆ: ಸುಮಾರು ಆರು ವರ್ಷಗಳಿಂದ ಕೃಷಿ ಜಮೀನುಗಳ ಪೋಡಿ ದುರಸ್ತಿಗೆ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರೂ ಇದೂವರೆಗೆ ಜಾಗದ ದುರಸ್ತಿ ಮಾಡಿಲ್ಲ ಎಂದು ಆರೋಪಿಸಿ ರೈತರು ಪಟ್ಟಣದ ತಾಲೂಕು ಕಚೇರಿ ಮುಂಭಾಗ ಸೋಮವಾರ ಧರಣಿ ನಡೆಸಿದರು.
ಬೆಳಗ್ಗೆ 11 ಗಂಟೆಯಿಂದ ಧರಣಿ ಆರಂಭಿಸಿದೆ. ಈ ವೇಳೆ ವಿಷದ ಬಾಟಲಿ ಇಟ್ಟು, ಸಮಸ್ಯೆ ಬಗೆಹರಿಸದಿದ್ದರೆ ವಿಷ ಕುಡಿಯುವುದಾಗಿ ರೈತ ಬಿ.ಪಿ.ಅನಿಲ್ ಎಚ್ಚರಿಸಿದರು.
ಕಂದಾಯ ಇಲಾಖೆಯಲ್ಲಿ ಬಡ ರೈತರ ಕೆಲಸಗಳು ಉಚಿತವಾಗಿ ಆಗುತ್ತಿಲ್ಲ. ಪೋಡಿ ದುರಸ್ತಿ ಆಗುವ ತನಕ ಆಹೋರಾತ್ರಿ ಧರಣಿ ನಡೆಯಲಿದೆ. ಕಂದಾಯ ಇಲಾಖೆಯ ಶೋಷಣೆಯಿಂದ ರೈತರಿಗೆ ಅನಾಹುತವಾದರೆ ಕಂದಾಯ ಇಲಾಖೆಯೇ ನೇರ ಹೊಣೆ ಹೊರಬೇಕು ಎಂದು ರೈತರು ಎಚ್ಚರಿಕೆ ನೀಡಿದರು.
5 ಫೈಲ್ ಆಗಿಲ್ಲ, 2 ಮಾತ್ರ ಆಗಿದೆ: ಇಪ್ಪತ್ತು ವರ್ಷಗಳಿಂದ ಆಗದ ಕೆಲಸವನ್ನು ಬೆಂಗಳೂರಿನ ಉದ್ಯಮಿಗಳಿಗೆ ಕೇವಲ 3 ತಿಂಗಳಲ್ಲಿ ದಾಖಲಾತಿ ಮಾಡುತ್ತಾರೆ. ಆದರೆ ಇಪ್ಪತ್ತು ವರ್ಷಗಳಿಂದ ನಮ್ಮ ರೈತರಿಗೆ ಮಾಡಿಕೊಡುವುದಿಲ್ಲ. ಹಣ ನೀಡಿದರೆ ಮಾತ್ರ ಇಲ್ಲಿ ಕೆಲಸ ಆಗುತ್ತದೆ. ಅದು ಬಿಟ್ಟು ಒಂದು ಸಣ್ಣ ಕೆಲಸವೂ ಕಂದಾಯ ಇಲಾಖೆಯಲ್ಲಿ ಆಗುವುದಿಲ್ಲ. ನಾವು ಲಂಚ ನೀಡಲು ನಮ್ಮಲ್ಲಿ ಕೊಳ್ಳೆ ಹೊಡೆದ ಹಣವಿಲ್ಲ ಎಂದು ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರಿಗೆ ಅನಿಲ್ ಏರು ಧ್ವನಿಯಲ್ಲಿ ಹೇಳಿದರು. ಪರಿಹಾರ ಸಿಗದಿದ್ದರೆ ನಾವು ವಿಷ ಕುಡಿದು ಸಾಯುತ್ತೇವೆ. ನಮ್ಮ ಸಾವಿಗೆ ಕಂದಾಯ ಇಲಾಖೆಯೇ ಕಾರಣ ಎಂದು ಎಚ್ಚರಿಸಿದರು.
ದುರಸ್ತಿ ಆಗದ 5 ಫೈಲುಗಳ ಕುರಿತು ತನಿಖೆ ಮಾಡಿದರೆ ಅರ್ಧದಷ್ಟು ಸೋಮವಾರಪೇಟೆ ತಾಲೂಕು ಕಂದಾಯ ಇಲಾಖೆಯ ನೌಕರರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಬೇಕಾಗುತ್ತದೆ. ನಂತರ ಸಿಬ್ಬಂದಿ ಸಸ್ಪೆಂಡ್ ಆಗುತ್ತಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ರೈತ ಮುಖಂಡ ಭರತ್ ಕುಮಾರ್ ಮಾತನಾಡಿ, ಸಣ್ಣ ಹಿಡುವಳಿದಾರರಿಗಾದರೂ ಕೂಡಲೇ ದುರಸ್ತಿ ಮಾಡಿಕೊಡಿ, ನಂತರ ದೊಡ್ಡ ಹಿಡುವಳಿದಾರರ ದುರಸ್ತಿ ಮಾಡಿ ಎಂದು ಎಸಿ ಅವರಿಗೆ ಹೇಳಿದರು.
ತಹಸೀಲ್ದಾರ್ ಸಷ್ಪನೆ: ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ತಹಸೀಲ್ದಾರ್ ಕೃಷ್ಣಮೂರ್ತಿ, 5 ಫೈಲ್‌ಗಳನ್ನು ಸಮಿತಿಯ ಸಭೆಯಲ್ಲಿ ಪೆಂಡಿಂಗ್ ಇಡಲಾಗಿದೆ. ಮುಂದೆ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದು. ಸದ್ಯದಲ್ಲೇ ಗೈರು ವಿಲೇ ಸಮಿತಿ ಸಭೆ ಕರೆಯಲಾಗುವುದು ಎಂದು ತಿಳಿಸಿದಾಗ, ರೈತರು ಇನ್ನೂ 24 ಗಂಟೆಯೊಳಗೆ ಸಭೆ ಕರೆಯಬೇಕೆಂದು ಆಗ್ರಹಿಸಿದರು.
ರೈತ ಸಮಿತಿಯ ಪದಾಧಿಕಾರಿಗಳಾದ ಜಿ.ಎಂ.ಹೂವಯ್ಯ,ಎಸ್.ಬಿ.ಭರತ್ ಕುಮಾರ್, ಕೆ.ಎಂ.ಲಕ್ಷ್ಮಣ, ಅನಂತರಾಮ್, ಕೆ.ಎಂ. ಲೋಕೇಶ್, ಕೆ.ಟಿ.ಪರಮೇಶ್, ರಮೇಶ್, ಮುಖಂಡರಾದ ನಾಪಂಡ ಮುತ್ತಪ್ಪ, ಎಸ್.ಎಂ.ಡಿಸಿಲ್ವಾ, ಮಚ್ಚಂಡ ಅಶೋಕ್, ಕೆ.ಬಿ.ಸುರೇಶ್ ಮತ್ತಿತರರು ಇದ್ದರು.