ಹಾಸನ: 2019ನೇ ಸಾಲಿನ ಯುಪಿಎಸ್‌ಸಿ ಪರೀಕ್ಷಾ ಫಲಿತಾಂಶವಿಂದು ಪ್ರಕಟವಾಗಿದ್ದು, ಹಾಸನದ ಯುವಕ ಕನ್ನಡದಲ್ಲೇ ಪರೀಕ್ಷೆ ಬರೆದು 594 ರ್ಯಾಂಕ್ ಪಡೆದು ಯಶಸ್ಸು ಗಳಿಸಿದ್ದಾರೆ.
ಅರಸೀಕೆರೆ ತಾಲ್ಲೂಕಿನ ಹರಳಕಟ್ಟೆ ಗ್ರಾಮದ ಯುವಕ ದರ್ಶನ್ ನಾಲ್ಕನೇ ಪ್ರಯತ್ನದಲ್ಲಿ ಸಫಲ ಕಂಡಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಮುಗಿಸಿದ ದರ್ಶನ್, 5ನೇ ತರಗತಿಯಿಂದ 8ನೇ ತರಗತಿವರೆಗೆ ಬಳ್ಳಾರಿಯ ರಾಷ್ಟ್ರೋತ್ತಾನ ಶಾಲೆಯಲ್ಲಿ ಕಲಿತರು.
9 ರಿಂದ 10ನೇ ತರಗತಿ ತಿಪಟೂರಿನ ಎಸ್‌ವಿಪಿ ಶಾಲೆಯಲ್ಲಿ ಓದಿದ ಅವರು 2009ರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿ, ಇನ್ಫೋಸಿಸ್ನಲ್ಲಿ ಆರು ವರ್ಷ ಕೆಲಸ ಮಾಡಿ ಬಳಿಕ ಅಮೆರಿಕಕ್ಕೆ ತೆರಳಿದರು. ಅಲ್ಲಿಯೂ ಎರಡೂವರೆ ವರ್ಷ ಕೆಲಸ ಮಾಡಿ, ಕೆಲಸ ಬಿಟ್ಟು ಯುಪಿಎಸ್‌ಸಿ ತಯಾರಿ ನಡೆಸಲು ಆರಂಭಿಸಿದರು.
ಮೂರು ಪ್ರಯತ್ನದಲ್ಲಿ ವಿಫಲವಾಗಿದ್ದ ದರ್ಶನ್, ನಾಲ್ಕನೇ ಪ್ರಯತ್ನದಲ್ಲಿ ಸಫಲತೆ ಕಂಡಿದ್ದಾರೆ. ವಿಶೇಷವೆಂದರೆ ಕನ್ನಡ ಮಾಧ್ಯಮದಲ್ಲೇ ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ. ಇದೀಗ ದರ್ಶನ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.