ಜಿಲ್ಲೆ

ನಡು ರಸ್ತೆಯಲ್ಲೇ ಪತ್ನಿ ಕತ್ತುಸೀಳಿದ ಪ್ರಕರಣ: ಸರ್ಕಾರಿ ನೌಕರಿಯಲ್ಲಿದ್ದ ಪತಿಗಿತ್ತಂತೆ 2 ಕೆಟ್ಟ ಹವ್ಯಾಸ!

ಹಾಸನ: ಆಕೆ ಒಂದು ವರ್ಷದ ಮಗುವಿನ ಜತೆ ಆಯಾದ ಸಂಸಾರ ಮಾಡಬೇಕಿತ್ತು. ಆದರೆ, ಪತಿಯ ದನದಾಹಿ ಕ್ರೂರತ್ವಕ್ಕೆ ಗಂಡನಿಂದಲೇ ಕತ್ತು ಸೀಳಿಸಿಕೊಂಡು ಜೀವ ಬಿಟ್ಟಳು. ಈ ಹೀನ ಕೃತ್ಯದಿಂದ ಕಂದಮ್ಮ ಸಹ ಅನಾಥವಾಗಿದೆ. ಶನಿವಾರ ರಾತ್ರಿ ನಡೆದ ಕರಾಳ ಕೃತ್ಯದ ಸಂಪೂರ್ಣ ಚಿತ್ರಣ ಇಲ್ಲಿದೆ.

ವರದಕ್ಷಿಣೆ ಕಿರುಕುಳ ನೀಡಿದ್ದಲ್ಲದೆ, ನರರೂಪದ ರಾಕ್ಷಸ ಪತಿರಾಯ ತಾಳಿಕಟ್ಟಿದ ಪತ್ನಿಯ ಕತ್ತನ್ನೇ ಸೀಳಿ ಕೊಲೆಗೈದಿರುವ ಘಟನೆ ಹಾಸದನ ಹೊಳೆನರಸೀಪುರದ ಹಳ್ಳಿಮೈಸೂರು ರಸ್ತೆಯ ಕೊಂಗಲಬೀಡು ಗ್ರಾಮದ ಬಳಿ ಶನಿವಾರ (ಅ.31) ರಾತ್ರಿ ನಡೆದಿದೆ. ಶಾಲಿನಿ ಕೊಲೆಯಾದ ದುರ್ದೈವಿ. ಪುನೀತ್ ಕೊಲೆ ಆರೋಪಿ.

ಪುನೀತ್ ಕೃತ್ಯವನ್ನು ನೋಡಿ ಬಿಡಿಸಲು ಬಂದ ರಸ್ತೆ ಬದಿಯವರಿಗೂ ಪುನೀತ್ ಚಾಕುವಿನಿಂದ ಇರಿದಿದ್ದಾನೆ. ಇದಾದ ಬಳಿಕ ಮಗುವನ್ನು ಕೊಲ್ಲಲು ಆತ ಮುಂದಾಗಿದ್ದ ಎಂದು ಶಾಲಿನಿ ಪೊಷಕರು ಆರೋಪಿಸಿದ್ದಾರೆ. ಕೊನೆಗೆ ಹೇಗೋ ಗ್ರಾಮಸ್ಥರು ಆತನನ್ನು ಹಿಡಿದು ಕೊಠಡಿಯೊಂದರಲ್ಲಿ ಕೂಡಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ಪುನೀತ್​ ಸರ್ಕಾರಿ ನೌಕರ

ಪುನೀತ್ ಮೂಲತಃ ಹೊಳೆನರಸೀಪುರದ ಕಡವಿನಕೋಟೆ ಗ್ರಾಮದವನು. ಕೆಎಸ್ ಆರ್​ಟಿಸಿಯಲ್ಲಿ ನೌಕರಿಯಲ್ಲಿದ್ದ. ಶಾಲಿನಿ ಹೊಳೆನರಸೀಪುರದ ಬಿಲ್ಲೇನಹಳ್ಳಿ ಗ್ರಾಮದ ಕೃಷ್ಣೇಗೌಡ ಎಂಬುವರ ಮಗಳು. 2018ರಲ್ಲಿ ಮದುವೆಯಾದ ಬಳಿಕ ಪುನೀತ್ ವರದಕ್ಷಿಣೆಗಾಗಿ ಶಾಲಿಯನ್ನು ಹಾಗೂ ಆಕೆ ಮನೆಯವರನ್ನು ಪೀಡಿಸುತ್ತಿದ್ದ. ಆಗಲೂ ಹಲವು ಬಾರಿ ಈ ಜೋಡಿ ಪೊಲೀಸ್​ ಠಾಣೆ ಮೆಟ್ಟಿಲೇರಿ ಪ್ರಕರಣ ಬಗೆಹರಿಸಿದ್ದರು. ಜತೆಗೆ ಪುನೀತ್​ಗೆ ಚಿನ್ನ ಒಂದಷ್ಟು ಹಣವನ್ನು ಶಾಲಿನಿ ಸಹೋದರರು ಕೂಲಿಮಾಡಿ ಹಣ ನೀಡುತ್ತಲೇ ಇದ್ದರು. ಆದರೆ, ಸರ್ಕಾರಿ ಕೆಲಸದಲ್ಲಿದ್ದರೂ ಪುನೀತ್ ಹಣಕ್ಕಾಗಿ ಶಾಲಿನಿ ಪೀಡಿಸುತ್ತಿದ್ದ. ಹಾಗೇ ಪುನೀತ್​ಗೆ ಇಸ್ಪೀಟ್​ ಹಾಗೂ ಹುಡುಗಿಯರ ಶೋಕಿಯು ಇತ್ತು.

ಹೀಗಿರುವಾಗ ನಿನ್ನೆ ಶಾಲಿನಿಯನ್ನು ಪುಸಲಾಯಿಸಿ ಪುನೀತ್ ಹೊರಗೆ ಹೋಗಿ ಬರಲು ಕರೊದೊಯ್ದಿದ್ದಾನೆ. ನಂತರ ಮಾರ್ಗ ಮಧ್ಯೆ ತನ್ನ ಪತ್ನಿ ಶಾಲಿನಿ ಕತ್ತು ಸೀಳಿದ್ದಾನೆ. ಇದನ್ನ ಕಂಡು ದಾರಿಹೋಕರು ಬಿಡಿಸಲು ಪ್ರಯತ್ನ ಮಾಡಿದರು. ಆದರೆ, ಅವರ ಮೇಲೂ ಪುನೀತ್ ಚಾಕು ಇರಿದಿದ್ದಾನೆ. ಜತೆಯಲ್ಲಿದ್ದ ಮಗುವನ್ನು ಕೊಲ್ಲಲು ಯತ್ನಿಸಿದ್ದ ಅನ್ನೊ ಅಂಶ ಬಯಲಾಗಿದೆ. ಘಟನೆ ನಂತರ ಸಾರ್ವಜನಿಕರು ಪುನೀತ್ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೆ ಪುನೀತ್ ಪೊಲೀಸ್ ವಶದಲ್ಲಿದ್ದು ತನಿಖೆ ಮುಂದುವರೆಸಿದ್ದಾರೆ. (ದಿಗ್ವಿಜಯ ನ್ಯೂಸ್​)