ಜಿಲ್ಲೆ

ಕುಡುಕ ಗಂಡನೊಂದಿಗೆ ಬಾಳಲಾಗದೆ 3 ಮಕ್ಕಳೊಂದಿಗೆ ಜಲಸಮಾಧಿಯಾದ ತಾಯಿ

ಹಾಸನ: ಕೂಲಿ ಕೆಲಸಕ್ಕೆ ಬಂದಿದ್ದ ಮಹಿಳೆ ಕುಡುಕ ಗಂಡನ ಕಿರುಕುಳ ತಾಳಲಾರದೆ ಬೇಸತ್ತು ಶನಿವಾರ ಕೊಡಗಿನ ಹೆಬ್ಬಾಲೆ ತೊರೆನೂರು ಬಳಿ ಹಾರಂಗಿ ನಾಲೆಗೆ ಮೂವರು ಮಕ್ಕಳೊಂದಿಗೆ ಹಾರಿ ಜಲ ಸಮಾಧಿಯಾಗಿದ್ದಾಳೆ.

ಚಿತ್ರದುರ್ಗ ಜಿಲ್ಲೆ ಕುರುಬರಹಟ್ಟಿ ಗ್ರಾಮದ ಚನ್ನಮ್ಮ (34), ಮಕ್ಕಳಾದ ವಿಜಯ್ (6), ವಿನಯ್ (4), ದೀಕ್ಷಾ (3) ನೀರು ಪಾಲಾದ ದುರ್ದೈವಿಗಳು.

ದೇವರಾಜು ಎಂಬಾತನ ಪತ್ನಿ ಚನ್ನಮ್ಮ ಹದಿನೈದು ದಿನಗಳ ಹಿಂದೆ ಮಕ್ಕಳೊಂದಿಗೆ ಕೊಡಗಿಗೆ ಶುಂಠಿ ಕೀಳುವ ಕೂಲಿ ಕೆಲಸಕ್ಕೆ ಬಂದಿದ್ದರು. ನಿತ್ಯ ಮದ್ಯ ಸೇವಿಸಿ ಬರುತ್ತಿದ್ದ ಪತಿ ಜಗಳ ತೆಗೆಯುತ್ತಿದ್ದ ಎನ್ನಲಾಗಿದೆ. ಮದ್ಯ ವ್ಯಸನಿಯಾಗಿದ್ದ ಗಂಡನ ಚಿತ್ರಹಿಂಸೆ ಸಹಿಸಲಾರದೆ ಮಾನಸಿಕವಾಗಿ ನೊಂದು ಶನಿವಾರ ಬೆಳಗ್ಗೆ ಮೂವರು ಮಕ್ಕಳನ್ನು ನಾಲೆಗೆ ನೂಕಿ ತಾನು ನೀರಿನಲ್ಲಿ ಮುಳುಗಿದ್ದಾಳೆ.

ಕೊಡಗಿನ ಗಡಿ ಭಾಗದ ಅರಗಲ್ ನಾಲೆಯಲ್ಲಿ ತೇಲುತ್ತಿದ್ದ ಮೃತದೇಹಗಳನ್ನು ಕುಶಾಲನಗರ ಮತ್ತು ಕೊಣನೂರು ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ಹೊರ ತೆಗೆದಿದ್ದಾರೆ. ಕೊಣನೂರು ಠಾಣೆಯಲ್ಲಿ ದೂರು ದಾಖಲಾಗಿದೆ.