ಜಿಲ್ಲೆ

ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಒತ್ತಾಯ

Hassan

ಹಾಸನ: ತಾಲೂಕಿನ ಹೊಂಗೆರೆ ಗ್ರಾಮದ ಕೆಲ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದೆ ಕತ್ತಲಿನಲ್ಲೇ ಕಾಲ ಕಳೆಯುವಂತಾಗಿದೆ ಎಂದು ಆರೋಪಿಸಿ ನಿವಾಸಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗ್ರಾಮದ ದೇವರಾಜ್, ನಾಗರಾಜ್, ಭದ್ರಯ್ಯ, ಹೊನ್ನಯ್ಯ ಸೇರಿದಂತೆ ಅನೇಕರ ಮನೆಗೆ ವಿದ್ಯುತ್ ವ್ಯವಸ್ಥೆ ಇಲ್ಲದಾಗಿದೆ. ಮನೆ ಪಕ್ಕದಲ್ಲೇ ವಿದ್ಯುತ್ ಕಂಬವಿದ್ದರೂ ತಂತಿ ಎಳೆಯಲು ಗ್ರಾಮ ಪಂಚಾಯಿತಿ ಹಾಗೂ ಸೆಸ್ಕ್ ಅಧಿಕಾರಿಗಳು ನಿರ್ಲಕ್ಷೃ ವಹಿಸುತ್ತಿದ್ದಾರೆ. ಈ ಸಂಬಂಧ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದರು.
ವಿದ್ಯುತ್ ಸಮಸ್ಯೆಯಿಂದ ಮಕ್ಕಳ ಕಲಿಕೆಗೆ ಸಮಸ್ಯೆಯಾಗಿದೆ. ರಾತ್ರಿಯಾದರೆ ಮನೆಯಿಂದ ಹೊರಬರಲಾಗುತ್ತಿಲ್ಲ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆ ಸಮೀಪಿಸುತ್ತಿದ್ದು, ವಿದ್ಯಾರ್ಥಿಗಳ ವ್ಯಾಸಂಗದ ಮೇಲೆ ದುಷ್ಪರಿಣಾಮ ಬೀರಿದೆ. ಕುಟುಂಬಗಳು ಆರ್ಥಿಕವಾಗಿ ದುರ್ಬಲರು ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿಲ್ಲ. ಜಿಲ್ಲಾಡಳಿತ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ವಾರದಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸದಿದ್ದರೆ ಸಂಸದ ಪ್ರಜ್ವಲ್ ರೇವಣ್ಣ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಸಂಬಂಧ ಜಿಲ್ಲಾಧಿಕಾರಿ ಗಿರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ದಲಿತ ಸಂಘರ್ಷ ಸಮಿತಿ ಸಂಘಟನಾ ಕಾರ್ಯದರ್ಶಿ ನಾಗರಾಜ್ ಹೆತ್ತೂರು, ಎಚ್.ಡಿ.ದರ್ಶನ್, ಎಚ್.ಎನ್.ಪೂಜಾ ಇತರರಿದ್ದರು.