ಜಿಲ್ಲೆ

ನೇಗಿಲು ಹಿಡಿದಿದ್ದಾರಾ ಹೇಳಿಕೆಗೆ ಮಾಜಿ ಪ್ರಧಾನಿ ಪ್ರತಿಕ್ರಿಯಿಸಿದ್ದು ಹೀಗೆ!

ಹಾಸನ: ಸಿದ್ದರಾಮಯ್ಯ ತುಂಬಾ ದೊಡ್ಡವರಿದ್ದಾರೆ, ಅವರ ವ್ಯಕ್ತಿತ್ವ ಇನ್ನಷ್ಟು ದೊಡ್ಡದಾಗಲಿ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿರುಗೇಟು ನೀಡಿದರು.

ನಗರದ ಸಂಸದರ ನಿವಾಸದಲ್ಲಿ ಶನಿವಾರ ಸಂಜೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಮಾತನಾಡಲು ಅವರಿಗೆ ಸ್ವಾತಂತ್ರೃವಿದೆ. ಏನು ಹೇಳುತ್ತಾರೋ ಹೇಳಲಿ. ತೀರ್ಪು ಕೊಡಲು ಜನರಿದ್ದಾರೆ ಎಂದು ’ದೇವೇಗೌಡರು ನೇಗಿಲು ಹಿಡಿದಿದ್ದಾರಾ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಮೂರುವರೆ ವರ್ಷ ಆಡಳಿತ ನಡೆಸಲಿ. ನಮ್ಮಿಂದ ಅದಕ್ಕೆ ತೊಂದರೆಯಾಗುವುದಿಲ್ಲ ಎಂದು ಈ ಹಿಂದೆಯೇ ಹೇಳಿದ್ದೇನೆ. ಸರ್ಕಾರಕ್ಕೆ ಧಕ್ಕೆ ತರುವುದು ನಮ್ಮ ಸಂಸ್ಕೃತಿಯಲ್ಲ. ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಹೆಚ್ಚುತ್ತಿದೆ. ಸಮಸ್ಯೆಗೆ ಸೂಕ್ತ ಪರಿಹಾರ ಕೈಗೊಳ್ಳುವುದು ಮುಖ್ಯಸ್ಥರ ಕರ್ತವ್ಯ ಎಂದರು.

ನಾನು ಇತ್ತೀಚೆಗೆ ರಾಜಕಾರಣದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಆರೋಪ, ಪ್ರತ್ಯಾರೋಪಗಳ ಕುರಿತು ಏನನ್ನೂ ಹೇಳಲು ಬಯಸುವುದಿಲ್ಲ. ಆರೋಗ್ಯ ಸರಿಯಿಲ್ಲದ ಕಾರಣ ಸಭೆ ಸಮಾರಂಭ ನಡೆಸಲೂ ಸಾಧ್ಯವಾಗುತ್ತಿಲ್ಲ. ಎಚ್.ಡಿ. ಕುಮಾರಸ್ವಾಮಿ ಹಾಗೂ ಬಂಡೆಪ್ಪ ಕಾಶಂಪುರ್ ಆ ಕೆಲಸ ಮಾಡುತ್ತಿದ್ದಾರೆ. ಆರೋಗ್ಯ ಸುಧಾರಣೆ ಆಗುವವರೆಗೆ ರಾಜಕೀಯವಾಗಿ ಓಡಾಡುವುದಿಲ್ಲ ಎಂದರು.

ನಾನು ಯಾವುದೇ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದಿಲ್ಲ. ಆಯುರ್ವೇದ ಚಿಕಿತ್ಸೆಯಿಂದಲೇ ಗುಣಮುಖನಾಗುತ್ತೇನೆ. ವಿಶ್ರಾಂತಿ ಅಗತ್ಯವೆಂದು ನಂಬಿದ್ದೇನೆ. ಇಂತಹ ಸಂದರ್ಭದಲ್ಲಿ ರಾಜಕೀಯವಾಗಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.