ಜಿಲ್ಲೆ

ಕೆರೆಯಲ್ಲಿ ಈಜುತ್ತಿದ್ದ ವ್ಯಕ್ತಿ ಪತ್ನಿ, ಮಗಳ ಕಣ್ಣೆದುರಲ್ಲೇ ಬಾರದ ಲೋಕಕ್ಕೆ ತೆರಳಿದ

ಚನ್ನರಾಯಪಟ್ಟಣ: ತಾಲೂಕಿನ ಮತಿಘಟ್ಟ ಕೆರೆಯಲ್ಲಿ ಈಜಲು ಹೋಗಿದ್ದ ವ್ಯಕ್ತಿ ದಡ ಸೇರುವ ವೇಳೆ ಕುಟುಂಬದವರ ಕಣ್ಣೆದುರಲ್ಲಿಯೇ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ತಾಲೂಕಿನ ಹಿರೀಸಾವೆ ಹೋಬಳಿ ಮತಿಘಟ್ಟ ಗ್ರಾಮದ ಹರೀಶ್(36) ಮೃತರು. ತಾಲೂಕಿನ ಜುಟ್ಟನಹಳ್ಳಿ ಬೋರೆಯಲ್ಲಿರುವ (ಗೇಟ್) ಚಿಕ್ಕಪ್ಪನ ವೈನ್‌ಸ್ಟೋರ್‌ನಲ್ಲಿ ಹರೀಶ್ ಕೆಲಸ ಮಾಡಿಕೊಂಡಿದ್ದ. ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ವೈನ್ ಸ್ಟೋರ್ ಬಂದ್ ಮಾಡಿದ್ದರಿಂದ ಭಾನುವಾರ ಮತಿಘಟ್ಟ ಗ್ರಾಮಕ್ಕೆ ಬಂದಿದ್ದನು.

ಹಿರೀಸಾವೆ-ಜುಟ್ಟನಹಳ್ಳಿ ಏತನೀರಾವರಿ ಯೋಜನೆಯಡಿ ನೀರು ಹರಿಸಲಾಗಿದ್ದು ಮತಿಘಟ್ಟ ಗ್ರಾಮದ ಕೆರೆಯು ಮೈದುಂಬಿ ಹರಿಯುತ್ತಿದೆ. ಇದನ್ನು ವೀಕ್ಷಿಸಲು ಭಾನುವಾರ ಸಂಜೆ 5 ಗಂಟೆ ವೇಳೆ ಪತ್ನಿ, ಮಗಳು, ಚಿಕ್ಕಪ್ಪ ಹಾಗೂ ಬಾಮೈದನೊಂದಿಗೆ ಬಂದಿದ್ದ ಎನ್ನಲಾಗಿದೆ. ಏರಿಯ ದಡದಲ್ಲಿರುವ ಸೋಪಾನ ಕಟ್ಟೆಯ ಮೇಲೆ ಪತ್ನಿ ಕಾವ್ಯ ಹಾಗೂ ಮಗಳು ಮಾನ್ಯ (7) ಕುಳಿತಿದ್ದು ಉಳಿದ ಮೂವರು ನೀರಿಗಿಳಿದು ಈಜಾಡಲು ಪ್ರಾರಂಭಿಸಿದ್ದಾರೆ. ಸೋಪಾನಕಟ್ಟೆ ಕಡೆಯಿಂದ ಮತ್ತೊಂದು ಬದಿಯಲ್ಲಿರುವ ದೇಗುಲದ ಕಡೆಗೆ ದೂರ ಈಜುತ್ತಾ ಸಾಗಿದ್ದ ಹರೀಶ್ ಹಿಂದಿರುಗಿ ಬಂದಿದ್ದ.

ಆದರೆ ಹೆಚ್ಚು ಸಮಯ ಈಜಾಡಿದ್ದ ಹರೀಶ್‌ಗೆ ಸುಸ್ತಾಗಿದ್ದು ಇನ್ನೇನು ಸೋಪಾನಕಟ್ಟೆ ಸಮೀಪಿಸುವಷ್ಟರಲ್ಲಿ ನೀರಿನಲ್ಲಿ ಮುಳುಗಿದವನು ಮೇಲೇಳಲೇ ಇಲ್ಲ. ಸೋಮವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ಚನ್ನರಾಯಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.