ಜಿಲ್ಲೆ

ಸಕಾಲ ಕುರಿತು ಅರಿವು ಮೂಡಿಸುವುದು ಎಲ್ಲರ ಜವಾಬ್ದಾರಿ

ಹಾಸನ: ಸರ್ಕಾರದ ಮಹತ್ವಕಾಂಕ್ಷಿ ಸಕಾಲ ಯೋಜನೆ ಅನುಷ್ಠಾನದ ಹೊಣೆಗಾರಿಕೆ ಸರ್ಕಾರಿ ಸಂಸ್ಥೆಗಳ ಮೇಲಿದೆ ಎಂದು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಕೆ.ಟಿ. ಕೃಷ್ಣೇಗೌಡ ಹೇಳಿದರು.

ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಕಾಲ ಸಪ್ತಾಹ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಿ ಕೆಲಸಗಳು ಪಾರದರ್ಶಕವಾಗಿರಬೇಕೆಂಬ ಕಾರಣಕ್ಕೆ ಸಕಾಲ ಯೋಜನೆ ಜಾರಿಗೊಳಿಸಲಾಗಿದೆ. ಜನಸಾಮಾನ್ಯರಿಗೆ ವಿವಿಧ ಯೋಜನೆಗಳ ಅರಿವು ಮೂಡಿಸುವುದು ಇದರ ಉದ್ದೇಶ. ಶಿಕ್ಷಣ ಇಲಾಖೆಯಲ್ಲಿ ಸಕಾಲ ಅರ್ಜಿಗಳು ಬರುವುದು ಕಡಿಮೆಯಾಗಿದ್ದು, ಬರುವ ಅರ್ಜಿಗಳನ್ನು ನಿಗದಿತ ಸಮಯದಲ್ಲಿ ವಿಲೇವಾರಿ ಮಾಡುವುದು ಸಂಬಂಧಪಟ್ಟವರ ಕರ್ತವ್ಯ ಎಂದರು.

ಕೋವಿಡ್ ಹಿನ್ನೆಲೆಯಲ್ಲಿ ಕಾಲೇಜಿಗೆ ವಿದ್ಯಾರ್ಥಿಗಳು ಬಾರದೆ ಇರುವುದರಿಂದ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಾಧ್ಯವಾದಷ್ಟು ಪರಸ್ಪರ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಮೂಲಕ ವಿದ್ಯಾರ್ಥಿಗಳಲ್ಲಿ ಇದರ ಅರಿವು ಮೂಡಿಸಲಾಗುತ್ತಿದೆ ಎಂದರು.