ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಅಂಧತ್ವ ಶಾಪ ಎಂದರೆ ಶಾಪವಾಗಿಯೇ ಉಳಿದೀತು. ಶಾಪವನ್ನು ಸವಾಲಾಗಿ ಸ್ವೀಕರಿಸಿ ವರವನ್ನಾಗಿ ಪರಿವರ್ತಿಸಿಕೊಳ್ಳುವುದು ಅವರವರ ಕೈಯಲ್ಲಿದೆ. ಇದಕ್ಕೊಂದು ನಿದರ್ಶನ 2024-25ನೇ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ 533 ಅಂಕಗಳನ್ನು ಪಡೆದು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಎಸ್‌ಡಿಎಂ ವಿದ್ಯಾರ್ಥಿನಿ ಹಸೀನಾ.
ಹಸೀನಾ ಮೂಲತಃ ಶಿವಮೊಗ್ಗದ ಅಗರ್ಧ ಹಳ್ಳಿಯ ನಿವಾಸಿ. ಹುಟ್ಟಿನಿಂದಲೇ ಅಂಧರಾಗಿದ್ದಾರೆ. ತಂದೆ ಕಾಜವಲಿ ಡ್ರೈವರ್ ವೃತ್ತಿ ಹಾಗೂ ತಾಯಿ ರಾಝಿಯಾ ಟೈಲರಿಂಗ್, ಅಡಕೆ ಸುಲಿಯುವ ಕೆಲಸ ಮಾಡುತ್ತಾರೆ. ಹಸೀನಾ ಅವರ ಸಹೋದರ ಕಾಸೀಮ್ ಪೀರ್ ಕೂಡ ಅಂಧತ್ವ ಹೊಂದಿದ್ದು, ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ಮಾಸ್ಟರ್ ಇನ್ ಪೊಲಿಟಿಕಲ್ ಸೈನ್ಸ್ ಮಾಡುತ್ತಿದ್ದಾರೆ. ಸಹೋದರಿ ರಝೀಯಾ ಕೆ. ಉಜಿರೆ ಎಸ್‌ಡಿಎಂ ಪದವಿ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಹಸೀನಾ 1ರಿಂದ 10ನೇ ತರಗತಿವರೆಗೆ ಶಾರದಾ ದೇವಿ ವಿಕಾಸ ಕೇಂದ್ರ(ಬ್ಲೈಂಡ್ ಸ್ಕೂಲ್)ದಲ್ಲಿ ಶಿಕ್ಷಣ ಪೂರೈಸಿದ್ದಾರೆ. ವಿಶೇಷವೆಂದರೆ ಎಸ್‌ಎಸ್‌ಎಲ್‌ಸಿಯಲ್ಲಿ ಕೂಡ ಶಾಲೆಗೆ ಪ್ರಥಮ. ಶಿಕ್ಷಣ ಹೊರತುಪಡಿಸಿ ಶಿಕ್ಷಣೇತರ ಚಟುವಟಿಕೆಗಳಾದ ಹಾಡು, ನೃತ್ಯ, ಬ್ಲೈಂಡ್ ಕ್ರಿಕೆಟ್, ಪ್ರಚಲಿತ ವಿದ್ಯಮಾನಗಳು, ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು. ಬ್ಲೈಂಡ್ ಕ್ರಿಕೆಟ್‌ನಲ್ಲಿ ಇವರು ರಾಜ್ಯಮಟ್ಟದವರೆಗೆ ಆಡಿದ್ದಾರೆ.
ಪ್ರಥಮ ಪಿಯುಸಿಗೆ ದಾಖಲಾತಿ ಬಯಸಿ ಬಂದಾಗ ನಮ್ಮೆಲ್ಲರಿಗೂ ಸ್ವಲ್ಪ ಆತಂಕವಿತ್ತು. ಸಾಮಾನ್ಯ ವಿದ್ಯಾರ್ಥಿಗಳ ನಡುವೆ ಈಕೆ ಹೇಗೆ ಹೊಂದಿಕೊಳ್ಳುತ್ತಾಳೋ ಎಂಬ ಅಳುಕು ಇತ್ತು. ಫ್ಲೆಕ್ಸ್‌ನಲ್ಲಿ ಈ ಬಾರಿ ನಿನ್ನ ಫೋಟೋ ಬರಲೇಬೇಕು ಎಂದು ಆಕೆಗೆ ಸವಾಲು ಹಾಕಿದ್ದೆ. ಇದೀಗ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಮೂಲಕ ಪೂರೈಸಿದ್ದಾಳೆ. ದಿವ್ಯಾ ಕುಮಾರಿ, ಉಪನ್ಯಾಸಕಿ ನನ್ನ ತಂದೆ- ತಾಯಿ ಬಗ್ಗೆ ನನಗೆ ಹೆಮ್ಮೆಯಿದೆ. ಬೇರೆ ಕಡೆ ಅಂಧ ಮಕ್ಕಳೆಂದರೆ ಮೂಲೆಯಲ್ಲಿ ಕೂರಿಸುತ್ತಾರೆ. ಆದರೆ ನಮ್ಮನ್ನು ತುಂಬಾ ಕಷ್ಟಪಟ್ಟು ಓದಿಸುತ್ತಿದ್ದಾರೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 533 ಅಂಕಗಳು ಬರುವುದಕ್ಕೆ ನನ್ನ ಪರಿಶ್ರಮದ ಜತೆಗೆ ಉಪನ್ಯಾಸಕ ವೃಂದ, ಕುಟುಂಬ, ಸ್ನೇಹಿತರು ಪ್ರೋತ್ಸಾಹ ಮಾಡಿದ್ದಾರೆ. ಹಸೀನಾ
ಶಾಸಕರಿಂದ ನೆರವು
ಇತ್ತಿಚೆಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಹಸೀನಾ ಸಾಧನೆಯನ್ನು ಗುರುತಿಸಿ ಅಭಿನಂದಿಸಿದ್ದರು. ಈಕೆಯ ಸಾಧನಾ ವರದಿಯನ್ನು ಗಮನಿಸಿ ಶಾಸಕ ಹರೀಶ್ ಪೂಂಜ, ಹಸೀನಾಳ ಮುಂದಿನ ಶಿಕ್ಷಣಕ್ಕೆ ನೆರವು ನೀಡಿದ್ದರು.