ಬೆಂಗಳೂರು :
ಧ್ವಜಾರೋಹಣವಾದ 7ನೇ ದಿನವಾದ ಗುರುವಾರ ರಾತ್ರಿ ಸಂಪಂಗಿಕರೆ ಅಂಗಳದ ಶಕ್ತಿಪೀಠದಲ್ಲಿ ಹಸೀಕರಗಕ್ಕೆ ವಿಶೇಷ ಪೂಜೆ ನಡೆಯಿತು. ಬಳಿಕ ಅರ್ಚಕ ಕಂಕುಳಿನಲ್ಲಿ ಹಸೀಕರಗವನ್ನು ಹೊತ್ತು ದಾರಿಯುದ್ದಕ್ಕೂ ದರ್ಶನ ನೀಡುತ್ತ ಕಾರ್ಪೋರೇಷನ್ ಮಾರ್ಗವಾಗಿ ಶುಕ್ರವಾರ ಬೆಳಗಿನ ಜಾವ ಧರ್ಮರಾಯಸ್ವಾಮಿ ದೇವಾಲಯ ತಲುಪಿದರು. ಬಳಿಕ ದೇವಾಲಯದಲ್ಲಿ ಎಂದಿನಂತೆ ದೇವತಾ ಆರಾಧನೆ ನಡೆಯಿತು. ಕಲಾಸಿಪಾಳ್ಯದ ಮರಿಸ್ವಾಮಿ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮುಂಜಾನೆಯಿಂದ ಸಂಜೆವರೆಗೆ ನಾನಾ ಧಾರ್ಮಿಕ ಕಾರ್ಯಗಳು ನಡೆದವು. ಕುಲಸ್ಥ ಮಹಿಳೆಯರು ಉಪವಾಸವಿದ್ದು, ರಾತ್ರಿ ದೇವಸ್ಥಾನ ಸೇರಿ ಪೊಂಗಲ್ (ಅಕ್ಕಿ, ಹಾಲು, ಬೆಲ್ಲದಿಂದ ತಯಾರಿಸಿದ) ಸಿದ್ಧಪಡಿಸಿ ದೇವಿಗೆ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿದರು. ಬಳಿಕ ದೇವಿಯ ಕಥನ ಪಾರಾಯಣ ನಡೆಯಿತು.