ಬಾಳೆಹೊನ್ನೂರಿನ ಭೈರವೇಶ್ವರ ಹಾಗೂ ಪರಿವಾರದೇವತೆಗಳ ಸುಗ್ಗಿಹಬ್ಬ ಸಂಭ್ರಮ, ಸಡಗರದಿಂದ ನಡೆಯಿತು. 
ಜಿಲ್ಲೆ

ಭೈರವೇಶ್ವರ ಪರಿವಾರ ದೇವರ ಸುಗ್ಗಿಹಬ್ಬ

ಬಾಳೆಹೊನ್ನೂರು: ರಂಭಾಪುರಿ ಮಠ ಸಮೀಪದ ಸೋಮೇಶ್ವರನಗರದ ಭೈರವೇಶ್ವರ, ದುರ್ಗಮ್ಮ, ಬಾಗಿಲಮಾರಿ ಅಮ್ಮನವರ ಹಾಗೂ ಪರಿವಾರ ದೇವತೆಗಳ ಸುಗ್ಗಿ ಹಬ್ಬ ವಿವಿಧ ಧಾರ್ಮಿಕ ಸಂಪ್ರದಾಯಗಳೊಂದಿಗೆ ಸಂಭ್ರಮದಿಂದ ನಡೆಯಿತು. ಸುಗ್ಗಿಹಬ್ಬದ ಅಂಗವಾಗಿ ಎಲ್ಲ ಪರಿವಾರ ದೇವರ ಉತ್ಸವ ಮೂರ್ತಿಯನ್ನು ಅಲಂಕರಿಸಿ ರಂಭಾಪುರಿ ಪೀಠಕ್ಕೆ ವಾದ್ಯಗೋಷ್ಠಿಯೊಂದಿಗೆ ತೆಗೆದು ಕೊಂಡು ಹೋಗಿ ಸುಗ್ಗಿಕುಣಿತ ನಡೆಸಲಾಯಿತು. ನಂತರ ಸುಗ್ಗಿ ಗದ್ದೆಯಲ್ಲೂ ಸಹ ಸುಗ್ಗಿಕುಣಿತ ನಡೆಸಲಾಯಿತು.
ಸುಗ್ಗಿ ಅಂಗವಾಗಿ ದೇವರ ಉತ್ಸವವು ಭದ್ರಾನದಿಗೆ ತೆರಳಿ ಗಂಗೆ ಪೂಜೆ ಸಲ್ಲಿಸಿ ಗ್ರಾಮಕ್ಕೆ ಮರಳಿ ಕೆಂಡಾರ್ಚನೆ ನಡೆಸಲಾಯಿತು. ನಂತರ ರಂಭಾಪುರಿ ಪೀಠದ ಸಮೀಪದ ಬಸವನಕೂಗು ಬಸವೇಶ್ವರಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ಸುಗ್ಗಿ ಗದ್ದೆಯಲ್ಲಿ ದೇವರ ಉತ್ಸವ ಮೂರ್ತಿಗಳಿಗೆ ದೂಪದ ಹೊಂತೆ ಹೊತ್ತಿಸಿ, ಆರತಿ ಎತ್ತಿಸಿ ಹಣ್ಣುಕಾಯಿಯನ್ನು ಭಕ್ತರು ಸಮರ್ಪಿಸಿದರು. ವಾಟುಕುಡಿಗೆ, ಮೆಣಸುಕುಡಿಗೆ, ಪೇಟೆಕೆರೆ, ಸೋಮೇಶ್ವರನಗರ ಹಾಗೂ ಸುತ್ತಮುತ್ತಲ ಗ್ರಾಮದ ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.