ಅರಕಲಗೂಡು: ತಾಲೂಕಿನ ಸುಕ್ಷೇತ್ರ ಶ್ರೀ ಅರಸೀಕಟ್ಟೆ ಅಮ್ಮ ದೇವತೆ ಜಾತ್ರಾ ಮಹೋತ್ಸವದ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಸುಗ್ಗಿ ಸಂಭ್ರಮ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು ಧಾನ್ಯಗಳ ರಾಶಿಗೆ ಪೂಜೆ ಸಲ್ಲಿಸಿ ಮೊರದಲ್ಲಿ ರಾಗಿ ತೂರುವ ಮೂಲಕ ಚಾಲನೆ ನೀಡಿದರು.
ಶ್ರೀ ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಮಾತನಾಡಿ, ಸುಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದೆ. ಸಮಿತಿಯ ಸೇವಾ ಕಾರ್ಯಗಳನ್ನು ಸಹಿಸದೆ ಕೆಲ ವಿರೋಧಿಗಳು ಕಾಲೆಳೆಯುವ ಕೆಲಸ ಮಾಡುತ್ತಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ. ದೇವಸ್ಥಾನವು ಸಮಿತಿಯ ಸುಪರ್ದಿಗೆ ಬಂದ ನಂತರ ಆದಾಯ ಸೋರಿಕೆ ತಡೆಗಟ್ಟಲಾಗಿದೆ. ಸಮಿತಿಯ ಪಾರದರ್ಶಕ ಆಡಳಿತದಿಂದಾಗಿ ಕೋಟಿಗಟ್ಟಲೇ ತೆರಿಗೆ ಹಣ ಈಗ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದೆ ಎಂದು ಹೇಳಿದರು.
ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ, ತೇಜೂರು ಮಠದ ಶ್ರೀ ಕಲ್ಯಾಣ ಸ್ವಾಮೀಜಿ, ಅರಮೇರಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ, ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಹೊಳೆನರಸೀಪುರ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಶಾಲು, ವೃತ್ತ ನಿರೀಕ್ಷಕ ವಸಂತ್, ಗ್ರಾಪಂ ಸದಸ್ಯರು, ಭಕ್ತರು, ಸಮಿತಿಯ ಕಾರ್ಯದರ್ಶಿ ಮಾದಾಪುರ ಕೃಷ್ಣೇಗೌಡ, ಪದಾಧಿಕಾರಿಗಳು ಇದ್ದರು.