ಮಾಯಕೊಂಡ: ಪ್ರಸ್ತುತ ದಿನಗಳಲ್ಲಿ ಸುಗ್ಗಿ ಕಾಲದ ವೈಭವ ಕಣ್ಮರೆಯಾಗುತ್ತಿದೆ. ಆದರೆ ಶಾಲಾ ಕಾಲೇಜುಗಳಲ್ಲಿ ಸುಗ್ಗಿ ಆಚರಣೆ ಮಾಡುವುದರೊಂದಿಗೆ ಮಕ್ಕಳಿಗೆ ಹಳ್ಳಿಯ ಸೊಗಡನ್ನು ಪರಿಚಯಿಸುವ ಕಾಲ ಬಂದಿದೆ ಎಂದು ಕೇಸರಿ ವಿದ್ಯಾಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎ.ಜಿ. ನಾಗಪ್ಪ ಅಭಿಮತ ವ್ಯಕ್ತಪಡಿಸಿದರು.
ಹೋಬಳಿ ಅತ್ತಿಗೆರೆ ಕೇಸರಿ ವಿದ್ಯಾಸಂಸ್ಥೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುಗ್ಗಿ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರೈತರು ಬಹು ಬೆಳೆ ಪದ್ಧತಿಯನ್ನು ಕೈ ಬಿಟ್ಟು ಅಡಕೆ, ದಾಳಿಂಬೆಯಂತಹ ವಾಣಿಜ್ಯ ಬೆಳೆಗಳತ್ತ ಒಲವು ತೋರಿದ್ದರಿಂದ ರಾಗಿ, ಜೋಳ ಸಿರಿಧಾನ್ಯ ಬೆಳೆಗಳು ಕಡಿಮೆ ಮತ್ತು ಹಳ್ಳಿಗಳಲ್ಲಿ ಸುಗ್ಗಿ ಮಾಡುತ್ತಿದ್ದ ಕಾಲ ಇಲ್ಲದಂತಾಗಿದೆ ಎಂದರು.
ಸಂಸ್ಥೆಯ ಸಹ ಕಾರ್ಯದರ್ಶಿ ಎ.ಎನ್. ಪ್ರಸನ್ನ ಕುಮಾರ್ ಮಾತನಾಡಿ, ಶಾಲೆಯಲ್ಲಿ ಪ್ರತಿ ವರ್ಷ ಸುಗ್ಗಿ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಮಕ್ಕಳು ಗ್ರಾಮೀಣ ಪ್ರದೇಶಗಳ ವಿವಿಧ ಉಡುಗೆ ತೊಟ್ಟು ಸಂಭ್ರಮಿಸುತ್ತಾರೆ. ಗ್ರಾಮೀಣ ಸೊಗಡಿನ ಈ ಕಾರ್ಯಕ್ರಮ ಆಯೋಜನೆ ಮಕ್ಕಳ ಮನಸ್ಸಿಗೆ ಮುದ ನೀಡುತ್ತದೆ ಎಂದರು.
ವಿದ್ಯಾರ್ಥಿಗಳು ವೈವಿಧ್ಯಮಯ ಉಡುಪು ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಕ್ಕಿ, ಜೋಳ, ರಾಗಿ ಧಾನ್ಯಗಳ ರಾಶಿಗಳನ್ನು ಹಾಕಿ ಪೂಜೆ ಸಲ್ಲಿಸಿದರು.
ಶಿಕ್ಷಕಿ ಪಿ. ಮಾಧುರಿ ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ಮಂಜುಳಾ ಪ್ರಸನ್ನ ಕುಮಾರ್, ಎಒ ರವಿ, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.