ಜಿಲ್ಲೆ

ಮಕ್ಕಳಿಗೆ ಶಿಕ್ಷಣ ಕೊಟ್ಟು ಶ್ರೀಮಂತರನ್ನಾಗಿಸಲಿ

ಹರಪನಹಳ್ಳಿ: ಹಣ ಗಳಿಸುವುದು ಮುಖ್ಯವಲ್ಲ. ಮಕ್ಕಳಿಗೆ ಶಿಕ್ಷಣ ಕೊಡಿಸಿ ಶ್ರೀಮಂತರನ್ನಾಗಿಸುವುದು ಮುಖ್ಯ ಎಂದು ಜಗದ್ಗುರು ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.

ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಶ್ರೀ ಕೋಲಶಾಂತೇಶ್ವರ ವಾಣಿಜ್ಯ ಮಳಿಗೆಗಳ ಉದ್ಘಾಟನೆ ಹಾಗೂ ಮಠದ ದ್ವಾರ ಬಾಗಿಲಿನ ಪೂಜೆ ಕಾರ್ಯಕ್ರಮ ನೇರವೇರಿಸಿ ಮಾತನಾಡಿ, ಭಕ್ತರ ಹಾಗೂ ಗುರುಗಳ ಮಧ್ಯ ಒಳ್ಳೆಯ ಸಂಬಂಧವಿದೆ. ಯಾವುದೇ ಜಾತಿ, ಪಂಥವಿಲ್ಲದೆ ಎಲ್ಲರೂ ಒಂದೇ ಎಂಬ ಭಾವನೆಯಿಂದ ನಡೆದುಕೊಳ್ಳಬೇಕೆಂದರು.

ಶ್ರೀಮಠದ ಅಭಿವೃದ್ಧಿ ಜತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುತ್ತಿದ್ದಾರೆ. ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ, ಸಂಸ್ಕೃತಿ ನೀಡುತ್ತ ಬಂದಿರುವ ಕೋಲಶಾಂತೇಶ್ವರ ಮಠದ ಗುರುಗಳಾದ ಶ್ರೀ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಕಾರ್ಯ ಮಾದರಿ. ಇವರು ಸರಳ, ಕಾಯಕ, ಶ್ರಮಜೀವಿಗಳಾಗಿದ್ದಾರೆ ಎಂದು ಬಣ್ಣಿಸಿದರು.

ವಕೀಲ ಕೃಷ್ಣಮೂರ್ತಿ ಮಾತನಾಡಿ, ಮಠಕ್ಕೆ ಊರಿನ ಎಲ್ಲ ಸಮುದಾಯದವರ ಸಹಕಾರದಿಂದ ಕಟ್ಟಡ ನಿರ್ಮಾಣವಾಗಿವೆ. ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಶಿಕ್ಷಣ, ದಾಸೋಹ, ಸಮಾಜ ಸೇವೆಗಳನ್ನು ಶ್ರೀಗಳು ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ಯುವ ಮುಖಂಡ ವೈ. ಡಿ.ಅಣ್ಣಪ್ಪ ಮಾತನಾಡಿದರು. ಕೋಲಶಾಂತೇಶ್ವರ ಮಠದ ಶ್ರೀ ಶಾಂತಲಿಂಗ ದೇಶಿಕೇಂದ್ರ ಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು. ವಕೀಲ ಜಗದೀಶ್ ಗೌಡ ಪಾಟೀಲ್, ಶ್ರೀನಿಧಿ, ಗ್ರಾಪಂ ಅಧ್ಯಕ್ಷೆ ವೈ.ರೇಖಾ ಕೊಟ್ರೇಶ್, ಪ್ರಶಾಂತ್ ಪಾಟೀಲ್, ಅಕ್ಕಮ್ಮ ಲಕ್ಷ್ಮಣ್, ಐ.ಸಲಾಂ ಸಾಹೇಬ್, ಎ.ಬಿ.ಸಿದ್ದನಗೌಡ, ಪಿಡಿಒ ಅಂಜಿನಪ್ಪ, ಪಿ.ಮರಿಯಪ್ಪ, ಎ.ಬಿ.ಮಲ್ಲಿಕಾರ್ಜುನ ಗೌಡ, ಬಿ.ರಾಮಪ್ಪ, ಎ.ಎಚ್.ನಾಗರಾಜಪ್ಪ, ಎಂ.ಸುರೇಶ್, ಎ.ಎಚ್.ಕೊಟ್ರೇಶಪ್ಪ, ಎಸ್.ಎಂ.ಸಿದ್ದಯ್ಯ ಇದ್ದರು.