ವಿವಿಧ ಹೋಬಳಿ ಘಟಕಗಳ ಪದಾಧಿಕಾರಿಗಳ ಪದಗ್ರಹಣ
ಹರಪನಹಳ್ಳಿ: ಕನ್ನಡ ಸಾಹಿತ್ಯ ಪರಿಷತ್ ಸ್ವತಂತ್ರ ಸಂಸ್ಥೆಯಾಗಿದೆ ಎಂದು ಕಸಾಪದ ಅಖಂಡ ಬಳ್ಳಾರಿ ಜಿಲ್ಲಾಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ ಹೇಳಿದರು.
ಕಸಾಪದ ಚಿಗಟೇರಿ, ಅರಸಿಕೇರಿ ಹಾಗೂ ತೆಲಿಗಿ ಹೋಬಳಿಗಳ ಪದಾಧಿಕಾರಿಗಳ ಪದಗ್ರಹಣ ಮತ್ತು ಪ್ರತಿಭಾ ಪುರಸ್ಕಾರ, ಸಾಧಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದ 31 ಜಿಲ್ಲಾ ಕೇಂದ್ರಗಳು ಸೇರಿ 251 ತಾಲೂಕುಗಳಲ್ಲಿ ಕಸಾಪ ಕ್ರಿಯಾಶೀಲವಾಗಿದೆ. ರಾಜ್ಯದ ಪ್ರಜ್ಞಾವಂತ ಕನ್ನಡಿಗರು ಇದರ ಆಜೀವ ಸದಸ್ಯತ್ವವನ್ನು ಪಡೆಯುವ ಮೂಲಕ ಕನ್ನಡ ನಾಡು ನುಡಿ, ನೆಲ, ಜಲ, ಉಳಿಸುವ ಕೆಲಸಕ್ಕೆ ಮುಂದಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಘಟಕದ ಅಧ್ಯಕ್ಷ ಕೆ.ಉಚ್ಚಂಗೆಪ್ಪ ಮಾತನಾಡಿ, ಮಹಾನ್ ಕವಿಗಳ ಬೀಡಾದ ಕನ್ನಡ ನಾಡಿನಲ್ಲಿ ಮೂಗನೂ ಕೂಡ ಪದ ಹಾಡುವ ಭಾಷೆ ಯಾವುದಾದರೂ ಇದ್ದರೆ ಅದು ಕನ್ನಡವಾಗಿದೆ. ಸುಲಭವೂ, ಸುಲಲಿತವೂ, ಪ್ರಾಚೀನವೂ ಆದ ಕನ್ನಡ ಭಾಷೆಯ ನಿತ್ಯ ಬಳಸಬೇಕು. ಇತರೆ ಭಾಷೆಗಳನ್ನು ಗೌರವಿಸಬೇಕು ಎಂದರು. ಶಿಕ್ಷಣ ಸಂಯೋಜಕ ಗಿರಜ್ಜಿ ಮಂಜುನಾಥ ಕನ್ನಡ ನಾಡು ನುಡಿ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಕಸಾಪ ತೆಲಿಗಿ ಹೋಬಳಿ ಅಧ್ಯಕ್ಷ ಕೆ ಎಸ್.ವೀರಭದ್ರಪ್ಪ, ಚುಸಾಪ ದಾವಣಗೆರೆ ಜಿಲ್ಲಾಧ್ಯಕ್ಷ ಜಿ.ಎಚ್. ರಾಜಶೇಖರ ಗುಂಡಗಟ್ಟಿ, ಕೋಶಾಧ್ಯಕ್ಷ ಎಂ. ಬಸವರಾಜ್, ಕರವೇ ತಾಲೂಕು ಉಪಾಧ್ಯಕ್ಷ ರಾಜು ಎಚ್., ಎಂ.ಜಿ.ನಾಗರಾಜ್, ಕಸಾಪ ಗೌರವ ಕಾರ್ಯದರ್ಶಿ ಜಿ.ಮಹಾದೇವಪ್ಪ, ಮಾಜಿ ಸೈನಿಕರಾದ ಮಂಜುನಾಥ್, ಎಚ್.ಎಂ.ಮೋಹನ್, ಮುಖಂಡರಾದ ನಂದೀಶ್ ಆಚಾರಿ, ಕೆ.ಯೋಗೀಶ್, ಈಡಿಗರ ಜೀವಪ್ಪ, ಎಸ್.ವಿ.ಪಾಟೀಲ್, ಈ.ಗಂಗಾಧರ, ಎಸ್.ಬಿ.ಪಾಟೀಲ್, ಪತ್ತಾರ ವೀರಣ್ಣ, ಜಿ.ಹಾಲೇಶಪ್ಪ ಇತರರು ಇದ್ದರು.