ಹರಪನಹಳ್ಳಿ ತಹಸಿಲ್ ಕಚೇರಿ ಎದುರು ಬಿಜೆಪಿ ತಾಲೂಕು ರೈತ ಮೊರ್ಚಾದಿಂದ ಪ್ರತಿಭಟನೆ ನಡೆಯಿತು. ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎನ್.ಕೊಟ್ರೇಶಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎಚ್.ಎಂ.ಅಶೋಕ, ಸದಸ್ಯ ಕಿರಣ್ ಶ್ಯಾನಭೋಗ್ ಇತರರಿದ್ದರು. 
ಜಿಲ್ಲೆ

ಜನಪರ ಯೋಜನೆಗಳ ರದ್ದು ಸರಿಯಲ್ಲ

ನರೇಶ್ ಕುಮಾರ್

ಹರಪನಹಳ್ಳಿ: ಕೇಂದ್ರ ಹಾಗೂ ರಾಜ್ಯ ಬಿಜೆಪಿ ಆಡಳಿತದ ಅವಧಿಯಲ್ಲಿದ್ದ ಜನಪರ ಯೋಜನೆಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ರದ್ದುಪಡಿಸಿರುವುದನ್ನು ಖಂಡಿಸಿ ಹಾಗೂ ಹರಪನಹಳ್ಳಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾದಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.

ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎನ್.ಕೊಟ್ರೇಶಪ್ಪ ಮಾತನಾಡಿ, ಕಳೆದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿತ್ತು. ಆದರೆ ಇಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನಪರ ಯೋಜನೆಗಳನ್ನು ರದ್ದುಗೊಳಿಸಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು. ರೈತರ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಬೆಳೆ ಹಾನಿ ಪರಿಹಾರ ಹಾಗೂ ವಿಮೆ ಶೀಘ್ರ ಒದಗಿಸಬೇಕು. ವಿದ್ಯುತ್ ದರ ಏರಿಕೆ ಕೈಬಿಡಬೇಕು. ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಯೋಜನೆಗಳಾದ ರೈತ ವಿದ್ಯಾನಿಧಿ, ಜಿಲ್ಲೆಗೊಂದು ಗೋಶಾಲೆ, ಭೂಸಿರಿ ಯೋಜನೆ, ಕಿಸಾನ್ ಸಮ್ಮಾನ್ ನಿಧಿ ಯೋಜನೆ, ರೈತಶಕ್ತಿ, ಕೃಷಿ ಭೂಮಿ ಮಾರಾಟ ಕಾಯ್ದೆ ರದ್ದುಗೊಳಿಸಿರುವುದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಎಚ್.ಎಂ.ಅಶೋಕ, ಸದಸ್ಯರಾದ ಕಿರಣ್ ಶ್ಯಾನಭೋಗ್, ಮುಖಂಡರಾದ ಎಚ್.ಟಿ.ಗಿರೀಶಪ್ಪ, ಲಿಂಬ್ಯನಾಯ್ಕ, ಬಿ.ವೈ.ವೆಂಕಟೇಶನಾಯ್ಕ, ಮಂಜ್ಯನಾಯ್ಕ, ಎ.ಜಿ.ಮಂಜುನಾಥ, ಅರಸನಾಳು ಕೊಟ್ರೇಶ, ಕಡತಿ ರಮೇಶ, ದಾದಾಪುರ ಶಿವಾನಂದ, ಉದಯಕುಮಾರ, ಗಿರೀಶ, ಶಿರಾಗನಹಳ್ಳಿ ವಿಶ್ವನಾಥ, ಬಣಕಾರ ಜಗದೀಶ, ವೀರೇಶಶೆಟ್ಟಿ, ರವಿನಾಯ್ಕ, ಓಂಕಾರಗೌಡ, ಕೆ.ಪರಸಪ್ಪ, ವಾಮಪ್ಪ, ನಿಂಗರಾಜ, ಶಂಕರ, ಕಣಿವಿಹಳ್ಳಿ ಮಾರುತಿ, ಕೋಟ್ಯಾಳ ಭೀಮಪ್ಪ ಇತರರಿದ್ದರು.