ಹರಪನಹಳ್ಳಿ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ರಾಜ್ಯ ಸರ್ಕಾರ ರದ್ದು ಮಾಡುವುದನ್ನು ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗಿರೀಶಬಾಬುಗೆ ಸೋಮವಾರ ಮನವಿ ಸಲ್ಲಿಸಿದರು.
ಎನ್‌ಇಪಿಯನ್ನು ಕೇಂದ್ರ ಸರ್ಕಾರ ಕೇವಲ ತನ್ನ ಮರ್ಜಿಯಂತೆ ರೂಪಿಸಿದ್ದಲ್ಲ. ದೇಶಾದ್ಯಂತಹ ವಿವಿಧ ಸ್ಥರಗಳಲ್ಲಿ ಶಿಕ್ಷಣ ರಂಗದ ಎಲ್ಲ ಬಾದ್ಯಸ್ಥರ ಜತೆಗೆ ನಿರಂತರ ಸಂವಹನ, ಮಾಹಿತಿ ವಿನಿಮಯ, ಚರ್ಚೆ ನಡೆಸಿ ತಯಾರಿಸಿದ ಕರಡಿನ ನೀತಿಯಾಗಿದೆ. ಈಗ ಇದನ್ನು ವಿರೋಧಿಸುವವರು ಅಂದು ತಮ್ಮ ಅಭಿಪ್ರಾಯಗಳನ್ನು ಏಕೆ ನೀಡಿರಲಿಲ್ಲ?.
ಈಗಿನ ಎನ್‌ಇಪಿ ಮೊದಲ ಬಾರಿಗೆ ವಿದ್ಯಾರ್ಥಿ ಕೇಂದ್ರೀಕೃತವಾಗಿದ್ದು, ಕೌಶಲಾಧಾರಿತ ಶಿಕ್ಷಣ, ಬಹು ಶಿಸ್ತಿನ ಅಧ್ಯಯನ, ಸ್ಥಳೀಯ ಭಾಷೆಗಳ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಿದೆ. ಎನ್‌ಇಪಿ ರದ್ದತಿ ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲೆಗೆ ದುಡುತ್ತದೆ.
ಹೀಗಾಗಿ ರಾಜ್ಯ ಸರ್ಕಾರ ರಾಜಕೀಯ ಪ್ರೇರಿತ ಸಂಕುಚಿತಗಳಿಗೆ ಒಳಗಾಗದೆ, ಶಿಕ್ಷಣವನ್ನು ರಾಜಕೀಯಗೊಳಿಸದೆ ಸಣ್ಣ ಪುಟ್ಟ ದೋಷಗಳಿದ್ದರೆ ಸರಿಪಡಿಸಿಕೊಂಡು ಎನ್‌ಇಪಿ ಮುಂದುವರಿಸಬೇಕೆಂದು ಒತ್ತಾಯಿಸಿದರು.
ಎಬಿವಿಪಿ ವಿಭಾಗ ಸಂಚಾಲಕ ವರುಣಕೌಟಿ, ಜಿಲ್ಲಾ ಸಹ ಸಂಚಾಲಕ ಕೊಟ್ರೇಶ ಬಂಗಲಿ, ನಗರ ಕಾರ್ಯದರ್ಶಿ ಪ್ರಜ್ವಲ್ ಆಚಾರ, ಟಿ.ಎಂ.ಚಂದ್ರು, ಅನೂಪ್ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.