ಹರಪನಹಳ್ಳಿ: ದಸಾರ ಹಬ್ಬ ರಾಜ್ಯದ ಹಿರಿಮೆಯಾಗಿದ್ದು, ಅದರ ಸವಿನೆನಪಿಗಾಗಿ ದಸಾರ ಕ್ರೀಡಾಕೂಟ ನಡೆಸುತ್ತಿದ್ದು ತಾಲೂಕು ಮಟ್ಟದಿಂದ ರಾಜ್ಯಮಟ್ಟದ ಕ್ರೀಡೆಗಳಲ್ಲಿ ಯಶಸ್ಸು ತರುವಂತೆ ಪ್ರತಿಭೆ ತೋರಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜಪ್ಪ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ನವೋದಯ ಕ್ರೀಡಾ ಹಾಗೂ ಸಾಂಸ್ಕೃತಿಕ ಯುವಕ ಸಂಘದಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ದಸರಾ ಕ್ರೀಡಕೂಟಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು.
ದಸರಾ ಕ್ರೀಡಾಕೂಟದಲ್ಲಿ 16ರಿಂದ 80 ವರ್ಷ ವಯಸ್ಸಿನವರು ಭಾಗವಹಿಸಲು ಅವಕಾಶವಿದೆ. ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟಗಳಲ್ಲಿ ಭಾಗವಹಿಸಿ ತಾಲೂಕಿಗೆ ಕೀರ್ತಿ ತರಬೇಕು. ದೈಹಿಕ ಶಿಕ್ಷಕರು ಪ್ರಾಮಾಣಿಕ ತೀರ್ಪು ನೀಡಿ ಮಕ್ಕಳ ಸಾಧನೆಗೆ ಪ್ರೋತ್ಸಾಹ ನೀಡಬೇಕು ಎಂದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಷಣ್ಮುಖಪ್ಪ ಮಾತನಾಡಿ, ಕ್ರೀಡಾಪಟುಗಳಿಗೆ ಸೋಲು-ಗೆಲುವಿಗಿಂತ ಆಟದಲ್ಲಿ ಭಾಗವಹಿಸುವುದು ಮುಖ್ಯವಾಗಬೇಕು. ತಾಲೂಕಿನ ಯುವಕ, ಯುವತಿಯರು ಹಿಂದೆ ತೋರಿಸಿದಂತಹ ಉತ್ಸಹ ಈ ಬಾರಿ ತೋರುತ್ತಿಲ್ಲ. ತಮ್ಮಲ್ಲಿನ ಪ್ರತಿಭೆಯನ್ನು ರಾಜ್ಯಮಟ್ಟಕ್ಕೆ ಕೊಂಡೊಯ್ಯುವ ಮೂಲಕ ತಾಲೂಕಿಗೆ ಹೆಸರು ತರಬೇಕು ಎಂದರು.
ಖೋಖೋ, ಕಬಡ್ಡಿ, ವಾಲಿಬಾಲ್, ಇತರ ಕ್ರೀಡೆಗಳು ನಡೆದವು. ನವೋದಯ ಕ್ರೀಡಾ ಹಾಗೂ ಸಾಂಸ್ಕೃತಿಕ ಯುವಕ ಸಂಘದ ಅಧ್ಯಕ್ಷ ಕಲಾರಿ ಫತ್ತೆಮಹಮ್ಮದ್, ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಜನಾರ್ದನರೆಡ್ಡಿ, ದೈಹಿಕ ಶಿಕ್ಷಕರಾದ ಎಸ್.ಆರ್.ಮಾರೇರ್, ರಾಮಚಂದ್ರಪ್ಪ, ನಾಗರತ್ನಮ್ಮ, ಲಕ್ಯನಾಯ್ಕ, ಜಯಪ್ರಕಾಶ್, ಎಲ್.ಬಸವರಾಜ, ಜಯಣ್ಣ ಪೂಜಾರ, ಕೋಟೆಪ್ಪ, ಸೂರ್ಯನಾಯ್ಕ ಇತರರಿದ್ದರು.