ಡಾ.ದತ್ತಾತ್ರೇಯ ಪೀಸೆ 
ಜಿಲ್ಲೆ

ಕಿಟ್ ಬಂದೊಡನೆ ಕೋವಿಡ್ ಟೆಸ್ಟ್

ಶ್ರೀನಾಥ

ಹರಪನಹಳ್ಳಿ: ಕೋವಿಡ್ ಸಾಂಕ್ರಾಮಿಕ ದೇಶದಲ್ಲಿ ಮತ್ತೆ ನಿಧಾನಗತಿಯಲ್ಲಿ ಹರಡುತ್ತಿದ್ದು, ತಾಲೂಕಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ದತ್ತಾತ್ರೇಯ ಪೀಸೆ ಹೇಳಿದ್ದಾರೆ.

ಕೋವಿಡ್ ಪರೀಕ್ಷೆಗೆ 500 ಕಿಟ್‌ಗಳ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಮುಂದಿನ ವಾರದಲ್ಲಿ ಬರಲಿವೆ. 20 ಆಕ್ಸಿಜನ್ ಸಿಲಿಂಡರ್‌ಗಳು ಹಾಗೂ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಸ್ಥಾಪಿಸಿರುವ ಆಕ್ಸಿಜನ್ ಘಟಕ ಸಹ ಚಾಲ್ತಿಯಲ್ಲಿದೆ.

ಮುಂಗಾರು ಮಳೆ ಆರಂಭವಾಗಿದ್ದು, ಸಹಜವಾಗಿ ಜ್ವರ, ನೆಗಡಿ ಎಂದು ರೋಗಿಗಳು ಆಸ್ಪತ್ರೆಯತ್ತ ಧಾವಿಸುತ್ತಿದ್ದಾರೆ. ಅಂತವರಿಗೆ ಸೂಕ್ತ ಚಿಕಿತ್ಸೆ ಕೊಡುತ್ತಿದ್ದೇವೆ. ಮಕ್ಕಳು ಮತ್ತು ದೊಡ್ಡವರಿಗೆ ಪ್ರತ್ಯೇಕ ಐದು ಹಾಸಿಗೆಯ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಕಿಟ್‌ಗಳು ಬಂದ ಕೂಡಲೇ ಕೋವಿಡ್ ಪರೀಕ್ಷೆ ಆರಂಭಿಸುತ್ತೇವೆ.

ತಾಲೂಕಿನಲ್ಲಿ ಸದ್ಯ ಯಾವುದೇ ಪ್ರಕರಣಗಳಿಲ್ಲ. ಆದರೆ, ಮಳೆ ಹೆಚ್ಚಿರುವ ಪರಿಣಾಮ ಗರ್ಭಿಣಿಯರು, ಮಕ್ಕಳು, ಹಿರಿಯ ನಾಗರಿಕರು ಜಾಗೃತರಾಗಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.