ಹರಪನಹಳ್ಳಿ ತಾಲೂಕಿನ ಚಿಗಟೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ವಲಯ ಮಟ್ಟದ ಕ್ರೀಡಾಕೂಟಗಳ ಕ್ರಿಯಾಯೋಜನೆಯ ಪೂರ್ವಭಾವಿ ಸಭೆಯನ್ನು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಷಣ್ಮುಖಪ್ಪ ಉದ್ಘಾಟಿಸಿದರು. ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ತಿರುಪತಿ, ಸೂರ್ಯನಾಯಕ್, ಪ್ರಮುಖರಾದ ಜ್ಯೋತಿ, ಸಂಗಮ್ ಇತರರಿದ್ದರು. 
ಜಿಲ್ಲೆ

ಮಕ್ಕಳು ವಿದ್ಯಾಭ್ಯಾಸಕ್ಕೆ ಸೀಮಿತವಾಗದಿರಲಿ


ಹರಪನಹಳ್ಳಿ: ವಿದ್ಯಾರ್ಥಿಗಳಲ್ಲಿ ಸೌಹಾರ್ದ ಮೂಡಿಸಲು ಕ್ರೀಡಾಕೂಟ ಹಮ್ಮಿಕೊಳ್ಳಲಾಗುತ್ತಿದ್ದು, ಪಾರದರ್ಶಕವಾಗಿ ನಡೆಸುವುದು ಎಲ್ಲರ ಹೊಣೆ ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಷಣ್ಮುಖಪ್ಪ ತಿಳಿಸಿದರು.

ತಾಲೂಕಿನ ಚಿಗಟೇರಿ ನಾರದಮುನಿ ಪ್ರೌಢಶಾಲೆಯಲ್ಲಿ ಗುರುವಾರ 2024-25 ಸಾಲಿನ ವಲಯ ಮಟ್ಟದ ಕ್ರೀಡಾಕೂಟಗಳ ಕ್ರಿಯಾಯೋಜನೆಗಳ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು. ಬಾಲ್ಯದಲ್ಲಿ ಮಕ್ಕಳು ಕೇವಲ ವಿದ್ಯಾಭ್ಯಾಸಕ್ಕೆ ಸೀಮಿತವಾಗಬಾರದು. ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ದೇಹ ಮತ್ತು ಮನಸ್ಸು ಚುರುಕುಗೊಳ್ಳಲಿದೆ. ಬಾಲ್ಯದಲ್ಲಿ ಮಕ್ಕಳು ಜಡತ್ವವನ್ನು ನೀಗಿಸಲು ಸಹಕಾರಿಯಾಗಲಿದೆ. ತಾಲೂಕಿನಲ್ಲಿ ಒಟ್ಟು 12 ಪ್ರಾಥಮಿಕ ಹಾಗೂ 6 ಪ್ರೌಢವಲಯಗಳಿವೆ. ಆಗಸ್ಟ್ ಒಳಗಡೆ ಎಲ್ಲ ವಲಯಗಳಲ್ಲಿಯೂ ಸ್ಥಳೀಯ ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ಕ್ರೀಡಾಕೂಟ ಆಯೋಜಿಸಲಾಗುವುದು ಎಂದರು.

ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜನಾರ್ದನ ರೆಡ್ಡಿ ಮಾತನಾಡಿ, ಆಟಗಳಿಂದ ಮಕ್ಕಳಲ್ಲಿ ಚೈತನ್ಯ ಮೂಡಲಿದೆ. ದೈಹಿಕ-ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು. ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್.ಹನುಮಂತಪ್ಪ ತೆಲಿಗಿ ರಾಣೆಬೆನ್ನೂರು ಅವರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ಓಬಳೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಜಯಣ್ಣ ಪೂಜಾರ್, ಶಿವಕುಮಾರ್ ಕೆ.ಜಿ., ಎಸ್. ಆರ್.ಮಾರ್ಯರ್, ಚಂದ್ರಪ್ಪ ಹಲಗೇರಿ, ದಯಾನಂದ, ಎಸ್.ಟಿ.ಲೋಕೇಶ್ ಇತರರಿದ್ದರು.