ಹರಪನಹಳ್ಳಿ: ಬಯಲಾಟ, ದೊಡ್ಡಾಟಗಳಂಥ ಸಾಂಸ್ಕೃತಿಕ ಕಲೆಗಳು ಕಣ್ಮರೆಯಾಗಲು ಇಂದಿನ ಟಿವಿ ಮಾಧ್ಯಮ ಹಾಗೂ ಮೊಬೈಲ್‌ನ ಗೀಳು ಕಾರಣವಾಗಿದೆ ಎಂದು ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಕೆಳಗಿನ ಉಪ್ಪಾರಗೇರಿಯ ದೇವಿರಮ್ಮ ರಂಗ ಚಾವಡಿಯಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ ಹಾಗೂ ಹರಪನಹಳ್ಳಿ ಸಾಂಸ್ಕೃತಿಕ ಸಂಘ ಶುಕ್ರವಾರ ಹಮ್ಮಿಕೊಂಡಿದ್ದ ಬಯಲಾಟ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ದಿನಗಳಲ್ಲಿ ಧಾರಾವಾಹಿಗಳ ಹುಚ್ಚು ಎಷ್ಟೋ ಕುಟುಂಬಗಳು ಇಬ್ಭಾಗ ಆಗಲು ಕಾರಣವಾಗಿವೆ. ಪ್ರಸ್ತುತ ಸಾಂಸ್ಕೃತಿಕ ನಾಡು ಕಟ್ಟುವ ಬಹುದೊಡ್ಡ ಕಾರ್ಯವಾಗಬೇಕಿದೆೆ. ಟಿವಿ, ಮೊಬೈಲ್‌ಗಳು ಇಲ್ಲದ ಕಾಲಘಟ್ಟದಲ್ಲಿ ಬಯಲಾಟ, ದೊಡ್ಡಾಟಗಳನ್ನು ವೀಕ್ಷಿಸಲು ಜನರು ತುಂಬಾ ಉತ್ಸಾಹದಿಂದ ರಂಗಭೂಮಿಯ ಕಡೆಗೆ ಧಾವಿಸಿ ಬರುತ್ತಿದ್ದರು ಎಂದರು.
ಶಿಗ್ಗಾವಿಯ ಬಯಲಾಟ ಹಿರಿಯ ಕಲಾವಿದ ಫಕ್ಕೀರೇಶ್ ಕೊಂಡಾಯಿ ಮಾತನಾಡಿ, ಇಂದಿನ ಯುವ ಪೀಳಿಗೆಯಲ್ಲಿ ಇಚ್ಛಾಶಕ್ತಿಯ ಕೊರತೆಯಿಂದ ಬಯಲಾಟ ಹಿಂದುಳಿಯಲು ಪ್ರಮುಖ ಕಾರಣವಾಗಿದೆ. ಕಳೆದ ಹಲವು ವರ್ಷಗಳ ಹಿಂದೆ ಪೌರಾಣಿಕ ಕಥಾ ಬಯಲು ನಾಟಕಗಳನ್ನು ಜನರು ನೆಲದಲ್ಲೇ ಕುಳಿತು ಕಾತುರತೆಯಿಂದ ವೀಕ್ಷಿಸುತ್ತಿದ್ದರು. ಯುವಕರಿಗೆ ಅದರ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಇಲ್ಲವಾದರೆ ಭವಿಷ್ಯದಲ್ಲಿ ಜನಪದ ಕಲಾ ನಾಟಕಗಳ ಮೌಲ್ಯ ಸಂಪೂರ್ಣ ಹದಗೆಡುತ್ತದೆ ಎಂದರು.
ಬಯಲಾಟ ಅಕಾಡೆಮಿ ಸದಸ್ಯ ಚಂದ್ರು ಕಾಳೇನಹಳ್ಳಿ ಹಾಸನ ಮಾತನಾಡಿ, ಎರಡು ಜಿಲ್ಲೆಗಳಿಗೆ ಸೀಮಿತವಾಗಿರುವ ಯಕ್ಷಗಾನವು ಇಂದು ನಾಡಿನಾದ್ಯಂತ ಗುರುತರ ಮಾತುಗಳನ್ನು ಗಳಿಸುತ್ತಿದೆ ಎಂದರೆ ಅದಕ್ಕೆ ಕರಾವಳಿ ಭಾಗದಲ್ಲಿ ದೊರಕುತ್ತಿರುವ ವಿಶೇಷ ಪ್ರಾಧಾನ್ಯತೆಯೇ ಮುಖ್ಯ ಕಾರಣ ಎಂದರು.