ಚೌಕಸಂದ್ರ ಜಯರಾಮ ನಾಯಕ್ ಹಾರೋಹಳ್ಳಿ
ಹಾರೋಹಳ್ಳಿ ಹೊಸ ತಾಲೂಕು ಎಂದು ೋಷಣೆಯಾಗಿ ಒಂದೂವರೆ ವರ್ಷ ಕಳೆಯುತ್ತಿದ್ದರೂ ಯಾವುದೇ ಸರ್ಕಾರಿ ಕಚೇರಿಗಳು ಆರಂಭಗೊಂಡಿಲ್ಲ.
ಕನಕಪುರ ತಾಲೂಕಿನಲ್ಲಿದ್ದ ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಗಳನ್ನು ಬೇರ್ಪಡಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಹಾರೋಹಳ್ಳಿ ತಾಲೂಕನ್ನಾಗಿಸಿದರು. ಆದರೆ, ಯಾವುದೇ ಇಲಾಖೆಗಳು ಇಲ್ಲಿಗೆ ಸ್ಥಳಾಂತರವಾಗಿಲ್ಲ. ಈಗಲೂ
ಜನಸಾಮಾನ್ಯರು ಕೆಲಸ ಕಾರ್ಯಗಳಿಗೆ ಕನಕಪುರ ತಾಲೂಕಿಗೆ ಅಲೆಯುವುದು ತಪ್ಪಿಲ್ಲ. ರಾಮನಗರ ವಿಧಾನಸಭಾ ಕ್ಷೇತ್ರದ ಹಾರೋಹಳ್ಳಿಗೆ ಕುಮಾರಸ್ವಾಮಿ ಹೊಸ ತಾಲೂಕಿನ ಸ್ಥಾನಮಾನ ನೀಡಿದರು. ಆದರೆ ಬಳಿಕ ಬಂದ ಸರ್ಕಾರಗಳು ಮೂಲ ಸೌಕರ್ಯ ಕಲ್ಪಿಸಲು ನಿರ್ಲಕ್ಷ್ಯವಹಿಸಿದ್ದು, ಒಂದೆರಡು ಕಚೇರಿ ಕಾರ್ಯಾರಂಭ ಮಾಡಿದ್ದು ಬಿಟ್ಟರೆ ಹೆಚ್ಚೇನು ಬದಲಾವಣೆಯಾಗಿಲ್ಲ.
ತಾಲೂಕು ಕಚೇರಿ ಹೊರತುಪಡಿಸಿ ತಾಲೂಕು ಪಂಚಾಯಿತಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ, ರೇಷ್ಮೆ ಇಲಾಖೆ ಸೇರಿ ಯಾವುದೇ ಇಲಾಖೆಗಳು ಹಾರೋಹಳ್ಳಿಗೆ ಸ್ಥಳಾಂತರಗೊಂಡಿಲ್ಲ.
ಶಾಸಕ ಇಕ್ಬಾಲ್ ಹುಸೇಸ್ ಹಾಗೂ ಮಾಜಿ ಸಂಸದ ಸಂಸದ ಡಿ. ಕೆ. ಸುರೇಶ್ ಅವರು ಎಲ್ಲ ಇಲಾಖೆಗಳನ್ನು ಶೀಘ್ರವೇ ಇಲ್ಲಿಗೆ ತರಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಅದು ಭರವಸೆಯಾಗಿಯೇ ಉಳಿದಿದೆ.
ಸಂಘಟನೆಗಳ ಮುಖಂಡರು ಹಾಗೂ ವಿವಿಧ ಪಕ್ಷದ ಕಾರ್ಯಕರ್ತರು, ಮುಖಂಡರು ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿವೆ. ಆದರೆ ಆ ಮನವಿಗಳೆಲ್ಲವೂ ಕಸದ ಬುಟ್ಟಿಗೆ ಸೇರಿವೆ ಹೊರತು ಬೇಡಿಕೆ ಈಡೇರಿಲ್ಲ.
ಹಾರೋಹಳ್ಳಿ ತಾಲೂಕಿಗೆ ಯಾವುದೇ ಇಲಾಖೆಗಳು ಬರದಿರುವುದರಿಂದ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತಿವೆ. ಸರ್ಕಾರದ ಯಾವುದೇ ಸೌಲಭ್ಯ ಪಡೆಯಬೇಕೆಂದರೂ ಸಾರ್ವಜನಿಕರು ಕನಕಪುರಕ್ಕೆ ಅಲೆಯುವುದು ತಪ್ಪಿಲ್ಲ. ಈಗಲಾದರೂ ಸರ್ಕಾರ ಎಚ್ಚೆತ್ತು ಹಾರೋಹಳ್ಳಿ ತಾಲೂಕಿಗೆ ಎಲ್ಲ ಇಲಾಖೆಗಳನ್ನು ಮಂಜೂರು ಮಾಡಿ ಅಭಿವೃದ್ಧಿಗೆ ವೇಗ ನೀಡಬೇಕಿದೆ.
ಜನಪ್ರತಿನಿಧಿಗಳು ಮತ ಕ್ಷೇತ್ರ ಹಾಗೂ ಪ್ರಭಾವ ವಲಯಕ್ಕೆ ಸೇರಿದ ಹೋಬಳಿಗೆ ತಾಲೂಕು ಸ್ಥಾನಮಾನ ದೊರಕಿಸುವಲ್ಲಿ ಯಶಸ್ಸು ಕಂಡರೂ, ಸೌಕರ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಲರಾಗಿದ್ದಾರೆ. ಹೊಸ ತಾಲೂಕು ಘೋಷಣೆವರೆಗೆ ಇದ್ದ ಕಾಳಜಿ ಹಾಗೂ ಹೆಗ್ಗಳಿಕೆ ಪಡೆದುಕೊಳ್ಳುವಲ್ಲಿ ತೋರಿದ ಆಸಕ್ತಿಯು ಸೌಲಭ್ಯ ಕಲ್ಪಿಸುವ ಬಗ್ಗೆ ತೋರಿಸಿಲ್ಲ ಎನ್ನುವುದು ಸಾರ್ವತ್ರಿಕ ಆರೋಪವಾಗಿದೆ.
ಹಾರೋಹಳ್ಳಿ ತಾಲೂಕು ಕಚೇರಿ ನಿರ್ಮಾಣಕ್ಕೆಂದು ಪಟ್ಟಣದ ಹೊರವಲಯದ ಕರಿಕಲ್ ದೊಡ್ಡಿ ಗ್ರಾಮದ ಬಳಿ 4 ಎಕರೆ ಜಾಗವನ್ನು ಮೊದಲು ನಿಗದಿಪಡಿಸಲಾಗಿತ್ತು. ಆದರೆ, ಪಟ್ಟಣದಿಂದ ದೂರ ಎಂದು ಕನ್ನಡಪರ ಸಂಘಟನೆಗಳು, ವಿವಿಧ ಪಕ್ಷದ ಮುಖಂಡರು, ಸಾರ್ವಜನಿಕರು ವಿರೋಧ ವ್ಯಕ್ತ ಪಡಿಸಿದ್ದರಿಂದ ಪಟ್ಟಣದ ಆನೇಕಲ್ ರಸ್ತೆಯಲ್ಲಿ ಸುಮಾರು 3 ಎಕರೆ ಜಾಗವನ್ನು ಗುರುತಿಸಲಾಗಿದೆ. ಆದರೆ ಯಾವುದೇ ಕಾಮಗಾರಿ ಆರಂಭವಾಗಿಲ್ಲ.
ಕನಕಪುರ ತಾಲೂಕಿನಿಂದ ಬೇರ್ಪಡಿಸಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಹಾರೋಹಳ್ಳಿ ತಾಲೂಕಿನ ಪೂರ್ವಕ್ಕೆ ತಮಿಳುನಾಡಿನ ಧರ್ಮಪುರಿ ಜಿಲ್ಲೆ, ಪಶ್ಚಿಮಕ್ಕೆ ರಾಮನಗರ ತಾಲೂಕು, ಉತ್ತರಕ್ಕೆ ಬೆಂಗಳೂರು ದಕ್ಷಿಣ ತಾಲೂಕು, ದಕ್ಷಿಣದಲ್ಲಿ ಕನಕಪುರ ತಾಲೂಕಿನ ಗಡಿ, ಆನೇಕಲ್ ತಾಲೂಕುಗಳ ಗಡಿ ಗುರುತಿಸಲಾಗಿದೆ.