ಹುಣಸೂರು: ತಾಲೂಕಿನಾದ್ಯಂತ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಯೋಗ ಸಂಗಮ ಮತ್ತು ಹರಿತ್ಯೋಗ(ಹಸಿರು ಪರಿಸರದೊಂದಿಗೆ ಯೋಗ) ಕಾರ್ಯಕ್ರಮ ಆಯೋಜಿಸಲಾಗಿತ್ತು.
ತಾಲೂಕಿನ ಬನ್ನಿಕುಪ್ಪೆಯ ಗ್ರಾ.ಪಂ. ವ್ಯಾಪ್ತಿಯ ಬನ್ನಮ್ಮನ ಕೆರೆ ದಂಡೆಯ ಮೇಲೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎನ್‌ಆರ್‌ಎಲ್‌ಎಂನ ತಾಲೂಕು ವ್ಯವಸ್ಥಾಪಕಿ ಮಂಜುಳಾ ನರಗುಂದ್, ಎಲ್ಲರೂ ಒತ್ತಡದ ಬದುಕಿನಲ್ಲಿ ಜೀವನ ನಡೆಸುತ್ತಿದ್ದು, ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಎದುರಿಸುತ್ತಿರುತ್ತಾರೆ. ಇದರಿಂದ ಮುಕ್ತರಾಗಲು ನಾವು ನಮ್ಮ ಜೀವನದ ಪದ್ಧತಿಯನ್ನು ಕೊಂಚ ಬದಲಾಯಿಸಿಕೊಳ್ಳುವ ಅನಿವಾರ್ಯತೆ ಇದೆ. ಪ್ರತಿನಿತ್ಯ ಯೋಗಭ್ಯಾಸದಿಂದ ಉತ್ತಮ ಆರೋಗ್ಯ ಪಡೆಯಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಿಡಿಒ ರಾಘವೇಂದ್ರ ಪ್ರಸನ್ನ, ಕಾರ್ಯದರ್ಶಿ ವೇದಮೂರ್ತಿ, ನರೇಗಾ ಐಇಸಿ ಸಂಯೋಜಕಿ ಪುಷ್ಪಾ, ಕರ ವಸೂಲಿಗಾರ ಮಹದೇವ ನಾಯಕ್, ಸಂಜೀವಿನಿ ಒಕ್ಕೂಟದ ಎಂಬಿಕೆ ಗಿರಿಜಾ, ಗ್ರಾಪಂ ಸಿಬ್ಬಂದಿ, ಒಕ್ಕೂಟದ ಮಹಿಳಾ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ತಾಲೂಕಿನ ಕೊತ್ತೇಗಾಲ, ಉಯಿಗೊಂಡನಹಳ್ಳಿ, ಹೆಗ್ಗಂದೂರು, ಸಿಂಗರಮಾರನಹಳ್ಳಿ, ಮೂಕನಹಳ್ಳಿ, ಗಾವಡಗೆರೆ, ಬಿಳಿಗೆರೆ ಸೇರಿದಂತೆ ಎಲ್ಲ ಗ್ರಾಪಂ ಹಾಗೂ ಸರ್ಕಾರಿ ಶಾಲೆಗಳ ಸಹಯೋಗದಲ್ಲಿ ಹಾಗೂ ಅಮೃತ ಸರೋವರ ಅನುಷ್ಠಾನಗೊಂಡಿರುವ ಸ್ಥಳಗಳಲ್ಲಿ ವಿವಿಧ ಯೋಗಾಸನದ ಅಭ್ಯಾಸ ನಡೆಸಲಾಯಿತು. ಜತೆಗೆ ಕೆಲವೆಡೆ ಸಸಿ ನೆಡಲಾಯಿತು.