ಜಿಲ್ಲೆ

ಹೇರಿಕುದ್ರು ತಿರುವು ಡೇಂಜರಸ್ ಸ್ಪಾಟ್

ಇಂದಿರಾ ಎನ್ ಕೆ

ಕುಂದಾಪುರ: ಬೈಂದೂರು-ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಹೇರಿಕುದ್ರು ಅಂಡರ್‌ಪಾಸ್ ಸಮೀಪದಲ್ಲಿರುವ ಅಪಾಯಕಾರಿ ತಿರುವು ಹಲವು ಅಪಘಾತಗಳಿಗೆ ಕಾರಣವಾಗುತ್ತಿದೆ. ಅಪಾಯಕಾರಿಯಾಗಿರುವ ಈ ತಿರುವನ್ನು ಸರಿಪಡಿಸಬೇಕು, ಸೂಚನಾಫಲಕ ಅಳವಡಿಸಬೇಕೆಂದು ಹೇರಿಕುದ್ರು ನಾಗರಿಕರು ಒತ್ತಾಯಿಸಿದ್ದಾರೆ. ಹೇರಿಕುದ್ರು ಅಂಡರ್‌ಪಾಸ್ ಕೊನೆಯಾಗುವಲ್ಲಿ ಸಂಗಮ್ ಸೇತುವೆಗಿಂತ ಹಿಂದೆ ತಿರುವು ಇದ್ದು, ಇದು ತೀರಾ ಅಪಾಯಕಾರಿಯಾಗಿದೆ. ಈಗಾಗಲೇ ಇಲ್ಲಿ ಅನೇಕ ಬಾರಿ ಅಪಘಾತವಾಗಿ, ವಾಹನಗಳು ಪಲ್ಟಿಯಾಗಿ ಕೆಳಗೆ ಬಿದ್ದ ಘಟನೆಗಳು ನಡೆದಿವೆ. ಕೆಲ ದಿನಗಳ ಹಿಂದೆ ಇಲ್ಲಿ ಕಾರು ಮತ್ತು ರಿಕ್ಷಾ ಪಲ್ಟಿಯಾಗಿ ಚಾಲಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಅಂಡರ್ ಪಾಸ್ ಕೊನೆಯಲ್ಲಿ ಸೇತುವೆ ಸಮೀಪ ಡಿವೈಡರ್ ಇರುವುದರಿಂದ ಪ್ರಯಾಣಿಕರಿಗೆ ಗೊಂದಲ ಉಂಟಾಗಿ ಅಪಘಾತಗಳಿಗೆ ಕಾರಣವಾಗುತ್ತಿದೆ. ಹೇರಿಕುದ್ರುವಿನಿಂದ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸುವ ವಾಹನ ಸವಾರರಿಗೂ ಇದು ತುಂಬಾ ಸಮಸ್ಯೆ ತಂದೊಡ್ಡುತ್ತಿದೆ. ಸೂಚನಾಫಲಕ ಅಳವಡಿಸಿಲ್ಲವಾದ್ದರಿಂದ ನೇರ ರಸ್ತೆಯಲ್ಲಿ ವೇಗವಾಗಿ ಬರುವ ವಾಹನ ಸವಾರರಿಗೆ ತಿರುವು ಇರುವುದು ಅರಿವಿಗೆ ಬರುವುದಿಲ್ಲ. ಇದರಿಂದ ವಾಹನ ನಿಯಂತ್ರಣ ತಪ್ಪಿ ಅಪಘಾತಗಳಿಗೆ ಕಾರಣವಾಗುತ್ತಿದೆ.

ತಿರುವು ಸರಿಪಡಿಸಿ

ಅಪಾಯಕಾರಿ ತಿರುವನ್ನು ನೇರವಾಗಿ ವಾಡಿದರೆ ಅಪಘಾತಗಳನ್ನು ತಪ್ಪಿಸಬಹುದಾಗಿದ್ದು, ಸಮಸ್ಯೆ ಬಗೆಹರಿಯಲಿದೆ. ಈ ಬಗ್ಗೆ ಇಲ್ಲಿನ ಜನ ಹಲವು ಬಾರಿ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ, ಕಾಮಗಾರಿ ವಹಿಸಿಕೊಂಡಿರುವ ಐಆರ್‌ಬಿಯವರಿಗೆ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ಪೂರ್ಣಗೊಳ್ಳದ ಸರ್ವೀಸ್ ರಸ್ತೆ

ಹೇರಿಕುದ್ರು ಅಂಡರ್ ಪಾಸ್‌ನ ಇಕ್ಕೆಲಗಳಲ್ಲಿ ಕೆಲ ದೂರದವರೆಗೆ ವಾತ್ರ ಸರ್ವೀಸ್ ರಸ್ತೆ ಆಗಿದೆ. ಅದು ಬಿಟ್ಟರೆ ಬಾಕಿ ಎಲ್ಲ ಕಡೆ ಸರ್ವೀಸ್ ರಸ್ತೆ ನಿರ್ಮಾಣವಾಗಿಲ್ಲ. ಬೊಬ್ಬರ್ಯ ದೈವಸ್ಥಾನದಿಂದ ಅಂಡರ್ ಪಾಸ್‌ವರೆಗೆ ಸರ್ವೀಸ್ ರಸ್ತೆ ಆಗಬೇಕಾಗಿದೆ. ಅಂಡರ್ ಪಾಸ್‌ನಿಂದ ಬಾನುಕುದ್ರುವರೆಗೂ ಸರ್ವೀಸ್ ರಸ್ತೆ ಆಗಬೇಕಿದೆ. ಇದಲ್ಲದೆ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಆಗಿಲ್ಲ. ನಾಗರಿಕರು ಈ ಬಗ್ಗೆ ಅನೇಕ ಬಾರಿ ಒತ್ತಾಯಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ. ವಿದ್ಯುತ್ ಲೈನ್ ಸ್ಥಳಾಂತರ ಕಾರ್ಯವೂ ಬಾಕಿ ಉಳಿದಿದೆ.

ಸರ್ವಿಸ್ ರಸ್ತೆ ವಾಡುತ್ತೇವೆ ಎಂದ ಅಧಿಕಾರಿಗಳು ಮತ್ತೆ ಇಲ್ಲಿಗೆ ಬರಲೇ ಇಲ್ಲ. ಇದರಿಂದ ಇಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಇಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾಜೆಕ್ಟ್ ಡೈರೆಕ್ಟರ್ ಮತ್ತು ಜಿಲ್ಲಾಧಿಕಾರಿಗಳೇ ನೇರ ಹೊಣೆ. ಇಲ್ಲಿನ ಸಮಸ್ಯೆ ಬಗ್ಗೆ ಖುದ್ದಾಗಿ ಹೆದ್ದಾರಿ ಇಲಾಖೆಯನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. -ಅಭಿಜಿತ್ ಪೂಜಾರಿ ಹೇರಿಕುದ್ರು, ಸ್ಥಳೀಯ