ಹರಿಹರ: ಶತಮಾನಗಳ ಇತಿಹಾಸ ಹೊಂದಿರುವ ಐತಿಹಾಸಿಕ ತಾಣ ಹೊಯ್ಸಳರ ಕಾಲದ ಶ್ರೀ ಹರಿಹರೇಶ್ವರ ದೇವಸ್ಥಾನ. ದೇಗುಲದಲ್ಲಿ ಒಂದೇ ವಿಗ್ರಹದಲ್ಲಿ ಹರಿ-ಹರರಿಬ್ಬರೂ ಇರುವುದರಿಂದ ಕ್ಷೇತ್ರಕ್ಕೆ ಹರಿಹರ ಎಂಬ ಹೆಸರು ಬಂದಿದೆ. ಕ್ರಿ.ಶ.1224ರಲ್ಲಿ ಹೊಯ್ಸಳ ದೊರೆ 2ನೇ ವೀರ ನರಸಿಂಹ ದಂಡನಾಯಕ ಪೊಳಾಲ್ವನು ಈ ದೇವಾಲಯ ನಿರ್ಮಿಸಿದನೆಂಬ ಐತಿಹ್ಯವಿದೆ.
ಪುರಾಣದ ಪ್ರಕಾರ ಗುಹಾಸುರನೆಂಬ ರಾಕ್ಷಸನ ವಧೆಗಾಗಿ ಹರಿ(ವಿಷ್ಣು) ಮತ್ತು ಹರ(ಶಿವ)ರು ಒಂದಾಗಿ ಹರಿಹರ ಸ್ವಾಮಿ ಅವತಾರ ತಾಳಿದ್ದಾರೆ ಎಂಬ ಪ್ರತೀತಿ ಇದೆ. ಈ ಸುಂದರ ಹರಿಹರೇಶ್ವರ ದೇವಾಲಯದ ಗರ್ಭಗುಡಿ, ಅಂತರಾಳ, ನವರಂಗ ಮತ್ತು ಮುಖ ಮಂಟಪಗಳಿಂದ ನಿರ್ಮಿತವಾಗಿದೆ. ಮುಖ ಮಂಟಪ 60 ಕಲಾತ್ಮಕ ಕಂಬಗಳಿಂದ ರಚನೆಯಾಗಿದೆ. ಕಂಬಗಳು ನೇರ ಮತ್ತು ತಲೆಕೆಳಗಾಗಿ ಕಾಣಿಸುತ್ತವೆ. ದೇವಾಲಯ ಮುಂಭಾಗದ ಎರಡೂ ಪಾರ್ಶ್ವಗಳಲ್ಲಿ ದೀಪ ಸ್ತಂಭ ನಿರ್ಮಿಸಲಾಗಿದೆ.
ದೇಗುಲದಲ್ಲಿನ ಮೂರ್ತಿ ಶಿವನ ಶರೀರದ ಅರ್ಧ ಭಾಗ ಮತ್ತು ವಿಷ್ಣುವಿನ ದೇಹದ ಅರ್ಧ ಭಾಗದಿಂದ ಕೂಡಿದ್ದರಿಂದ ‘ಹರಿಹರೇಶ್ವರ’ನೆಂಬ ನಾಮಾಂಕಿತವಾಗಿದೆ. ಕಪ್ಪು ಬಣ್ಣದ ಹರಿಹರೇಶ್ವರ ಮೂರ್ತಿ 7 ಅಡಿ ಏಕಶಿಲಾ ವಿಗ್ರಹವಾಗಿರುವುದು ವಿಶೇಷ.
ತುಂಗಭದ್ರಾ ನದಿ ದಡದಲ್ಲಿ ಶ್ರೀ ಹರಿಹರೇಶ್ವರ ದೇವಾಲಯ, ಹರಿ-ಹರ ಎರಡು ಹಿಂದು ದೇವತೆಗಳ ಸಂಯೋಜನೆಯಿಂದ ಈ ಹೆಸರು ಪಡೆದುಕೊಂಡಿದೆ. ಅಲ್ಲದೇ ಹರಿಹರ ‘ದಕ್ಷಿಣ ಕಾಶಿ’ ಎಂದೇ ಪ್ರಖ್ಯಾತಿ ಹೊಂದಿದೆ.
*ಫೆ.5ಕ್ಕೆ ರಥೋತ್ಸವ:
ಶ್ರೀ ಹರಿಹೇಶ್ವರ ಜಾತ್ರೆ ಅಂಗವಾಗಿ ಫೆ.3ರಂದು ಬೆಳಗ್ಗೆ ಅಶ್ವೋತ್ಸವ ಹಾಗೂ ರಾತ್ರಿ 9.25ರಿಂದ 9.50 ರವರೆಗೆ ಕನ್ಯಾಲಗ್ನದಲ್ಲಿ ಕಲ್ಯಾಣೋತ್ಸವ, ಫೆ.4ರಂದು ಗಜೋತ್ಸವ ಜರುಗಲಿದೆ. ಫೆ.5ರಂದು ಮಾಘ ಮಾಸದ ಶುಕ್ಲ ಭರತ ಹುಣ್ಣಿಮೆಯಂದು ದಾಸರು ದೇವಸ್ಥಾನಕ್ಕೆ ಆಗಮಿಸಿದ ನಂತರ ಪಲ್ಲಕ್ಕಿಯಲ್ಲಿ ಶ್ರೀ ಹರಿಹರೇಶ್ವರನನ್ನು ಕರೆತಂದು ತೇರುಗಡ್ಡೆ ವೃತ್ತದ ರಥದಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ 10.50ಕ್ಕೆ ಮೇಷ ಲಗ್ನದಲ್ಲಿ ಬ್ರಹ್ಮ ರಥೋತ್ಸವ ನೆರವೇರಿಸಲಾಗುತ್ತದೆ.
ಫೆ.6ರಂದು ಸ್ಥಾಪಿತ ದೇವತಾ ಪೂಜೆ, ನಂದಿ ಕಂಕಣ ವಿಸರ್ಜನೆ, ಧ್ವಜ ವಿಸರ್ಜನೆ, ಉತ್ಸವ ಕೈಂಕರ್ಯ ಪೂರ್ಣಗೊಳ್ಳುತ್ತದೆ.