ಜಿಲ್ಲೆ

ಯೋಗ-ಧ್ಯಾನದಿಂದ ಸ್ಮರಣಶಕ್ತಿ ಹೆಚ್ಚಳ

Chitradurga

ದಾವಣಗೆರೆ: ವಿದ್ಯಾರ್ಥಿಗಳು ನಿತ್ಯ ಯೋಗಾಭ್ಯಾಸ-ಧ್ಯಾನ ಮಾಡುವುದರಿಂದ ಏಕಾಗ್ರತೆ, ಜ್ಞಾಪಕಶಕ್ತಿ ಹೆಚ್ಚಲಿದೆ ಎಂದು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶಾರದೇಶನಂದಜೀ ಹೇಳಿದರು.

ಸಪ್ತರ್ಷಿ ಯೋಗಧಾರ ಸ್ಪೋರ್ಟ್ಸ್ ಅಕಾಡೆಮಿ ಸಹಯೋಗದಲ್ಲಿ ಹರಿಹರದ ಸತ್ಯ ಗಣಪತಿ ದೇವಸ್ಥಾನ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.

ಆತ್ಮವು ಪರಮಾತ್ಮನಲ್ಲಿ ಸಮ್ಮಿಲನಗೊಳ್ಳುವುದೇ ಯೋಗ ಆಗಿದೆ. ಋಷಿಮುನಿಗಳು ಯೋಗ-ಧ್ಯಾನ, ಜಪತಪ ಮಾಡುತ್ತಾ ಬಂದಿದ್ದಾರೆ. ಸನ್ಯಾಸಿಗಳು ಕೂಡ ಉತ್ತಮ ಶರೀರಕ್ಕಾಗಿ ಸರಳ ಪ್ರಾಣಾಯಾಮ, ಯೋಗಾಭ್ಯಾಸ ಮಾಡುತ್ತಾ ಬಂದಿದ್ದಾರೆ. ಯೋಗದಿಂದ ರೋಗಮುಕ್ತವಾಗಲಿದೆ, ಆತ್ಮಶುದ್ಧಿಯಾಗಲಿದೆ ಎಂದು ತಿಳಿಸಿದರು.

ಜೀವನದಲ್ಲಿ ಅಜ್ಞಾನ ಹೆಚ್ಚಿದರೆ ಆತ್ಮಹತ್ಯೆಗೂ ಯತ್ನಿಸುತ್ತಾರೆ. ಇದನ್ನು ತಪ್ಪಿಸಲು ಅಗತ್ಯವಾದ ಪ್ರಾಣಶಕ್ತಿಯನ್ನು ಧ್ಯಾನ ನೀಡಲಿದೆ. ಇದು ವಿದ್ಯೆಯ ಮೂಲ. ಚಿಕ್ಕಂದಿನಿಂದಲೇ ಸರಿಯಾದ ಅಭಿಪ್ರಾಯ, ಅನುಕೂಲವಾಗಿ ಆಲೋಚಿಸುವುದನ್ನು, ಸರಿಯಾಗಿ ಮಾತನಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದರು.

ನಗರಸಭೆ ಸದಸ್ಯ ಶಂಕರ್ ಖಟಾವ್‌ಕರ್ ಮಾತನಾಡಿ, ಪ್ರತಿಯೊಬ್ಬ ಮನುಷ್ಯನು ದೈಹಿಕ ಹಾಗೂ ಮಾನಸಿಕವಾಗಿ ಚೈತನ್ಯಪೂರ್ಣವಾಗಿರಲು ಯೋಗವು ದಿವ್ಯ ಔಷಧಿ. ಉತ್ತಮ ಜೀವನ ಮತ್ತು ಆರೋಗ್ಯಕ್ಕಾಗಿ ಯೋಗ ಬೇಕು ಎಂದರು.

ಹರಿಹರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಎನ್.ಪಿ. ಮಂಜುಳಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಯೋಗ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಕೈಗಾರಿಕೋದ್ಯಮಿ ಸತ್ಯನಾರಾಯಣರಾವ್ ಮಾತನಾಡಿದರು. ನಂತರ ಆಯೋಜಿಸಿದ್ದ ಸಮಾರೋಪದಲ್ಲಿ ಹರಿಹರದ ಎಸ್‌ಜೆವಿಪಿ ಕಾಲೇಜಿನ ಪ್ರಾಧ್ಯಾಪಕ ವೀರಣ್ಣ ಪಿ. ಶೆಟ್ಟರ್, ಅಂತಾರಾಷ್ಟ್ರೀಯ ಯೋಗಪಟು ಕೆ. ಜೈಮುನಿ, ಯೋಗ ಶಿಕ್ಷಕ ಬಿ. ಜಯರಾಂ, ಸಪ್ತರ್ಷಿ ಯೋಗಧಾರ ಸ್ಪೋರ್ಟ್ಸ್ ಅಕಾಡೆಮಿ ಪದಾಧಿಕಾರಿಗಳಿದ್ದರು.