ಜಿಲ್ಲೆ

ಸೃಷ್ಟಿ, ಸ್ಥಿತಿ, ಲಯಗಳು ದೇವಿಯ ಅಂಶ

Davangere - Desk - Basavaraja P

ನಿವೃತ್ತ ಶಿಕ್ಷಕಿ ನಾಗಮಣಿ ಶಾಸ್ತ್ರಿ ಅನಿಸಿಕೆ I ಸೌಂದರ್ಯ ಲಹರಿ ಕಾವ್ಯ ಪಠಣ

ಹರಿಹರ: ಜಗತ್ತಿನ ಸೃಷ್ಟಿ, ಸ್ಥಿತಿ, ಲಯ ಕರ್ತರಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರೆಲ್ಲರೂ ದೇವಿಯ ಅಂಶವಾಗಿದ್ದಾರೆ ಎಂಬುದನ್ನು ಸಾಕ್ಷೀಕರಿಸಲು ಆದಿ ಶಂಕರಾಚಾರ್ಯರು ಸೌಂದರ್ಯ ಲಹರಿ ಕಾವ್ಯ ರಚಿಸಿದ್ದಾರೆ ಎಂದು ನಿವೃತ್ತ ಶಿಕ್ಷಕಿ ನಾಗಮಣಿ ಶಾಸ್ತ್ರಿ ತಿಳಿಸಿದರು.

21ನೇ ವರ್ಷದ ಸಾಮೂಹಿಕ ದಸರಾ ಮತ್ತು ಬನ್ನಿ ಮಹಡಿಯುವ ಕಾರ್ಯಕ್ರಮದ ಅಂಗವಾಗಿ ನಗರದ ನಡುವಲಪೇಟೆಯ ನಾಮದೇವ ಕಲ್ಯಾಣ ಮಂಟಪದಲ್ಲಿ ಶನಿವಾರ ಬೆಳಗ್ಗೆ ದುರ್ಗಾಪೂಜೆ ನಂತರ ಹಮ್ಮಿಕೊಂಡಿದ್ದ ಶ್ರೀ ಆದಿಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿ ಸಾಮೂಹಿಕ ಪಠಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ನೂರು ಶ್ಲೋಕಗಳನ್ನು ಹೊಂದಿರುವ ಸೌಂದರ್ಯ ಲಹರಿ, ಕಾವ್ಯ ಮತ್ತು ಅಧ್ಯಾತ್ಮ ದೃಷ್ಟಿಯಿಂದ ಅತ್ಯುತ್ತಮವಾಗಿದೆ. ಪುರುಷಾರ್ಥ ಮತ್ತು ಪರಮಾರ್ಥ ಎರಡರ ಬಗ್ಗೆ ಸಮನ್ವಯ ನೀಡುತ್ತದೆ ಎಂದರು.

ತಾಯಿ, ಜಗನ್ಮಾತೆ ಹಾಗೂ ಸರ್ವಶಕ್ತೆ ಆಕೆಯ ಆರಾಧನೆ ಜಗತ್ತಿನ ಸರ್ವಶಕ್ತಿಯ ಆರಾಧನೆಯಾಗಿದೆ. ನಿತ್ಯಪಾರಾಯಣ ಮಾಡುವುದರಿಂದ ಎಲ್ಲ ಅವಬಂಧನಗಳು ಕಳಚುತ್ತವೆ. ಲಿಂಗಭೇದವಿಲ್ಲದೇ ಪುರುಷ ಹಾಗೂ ಮಹಿಳೆಯರು ಸೌಂದರ್ಯ ಲಹರಿ ಪಠಣ ಮಾಡಬಹುದು ಎಂದರು.

ನವರಾತ್ರಿಯಂದು ಜಗನ್ಮಾತೆ ದುರ್ಗಾದೇವಿಯನ್ನು ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ರೂಪದಲ್ಲಿ ಭಕ್ತರು ಪೂಜಿಸುತ್ತಾರೆ. ಶ್ರೀ ಶಂಕರ ಭಗವತ್ಪಾದರು ತಾಯಿಯ ಸೌಂದರ್ಯ ವರ್ಣಿಸುತ್ತ ಭಕ್ತಿ ಭಾವದಿಂದ ಅವಳಿಗೆ ನಮಿಸುವ ಸಕಲ ಮಂತ್ರ ತಂತ್ರಸಾರವಿರುವ ಸೌಂದರ್ಯ ಲಹರಿಯು ಅತ್ಯಂತ ಶ್ರೇಷ್ಠ ಕೃತಿಯಾಗಿದೆ. ಇದನ್ನು ಪಠಿಸುವ ಮೂಲಕ ಎಲ್ಲರ ಕಷ್ಟಕಾರ್ಪಣ್ಯಗಳು ದೂರವಾಗುತ್ತದೆ ಎನ್ನುವುದು ಆಸ್ತಿಕರ ಭಾವನೆಯಾಗಿದೆ ಎಂದರು.

ನಗರದ ವಿವಿಧ ಸಮಾಜದ ಮಹಿಳಾ ಸಂಘಟನೆಗಳ ಮಹಿಳೆಯರು ಹಾಗೂ ಸಮೂಹಿಕ ದಸರಾ ಮಹೋತ್ಸವ ಸಮಿತಿಯ 100ಕ್ಕೂ ಹೆಚ್ಚು ಮಹಿಳೆಯರು ಸೌಂದರ್ಯ ಲಹರಿಯನ್ನು ಸಾಮೂಹಿಕವಾಗಿ ಪಠಣದಲ್ಲಿ ಭಾಗವಹಿಸಿದ್ದರು. ನಂತರ ಪ್ರತಿಯೊಬ್ಬ ಮಹಿಳೆಯರಿಗೂ ಉಡಿ ತುಂಬ ಕಾರ್ಯಕ್ರಮ ನೆರವೇರಿತು.

ಸಮಿತಿಯ ಅಧ್ಯಕ್ಷ ಶಂಕರ್ ಖಟಾವಕರ್, ಶಿವಪ್ರಕಾಶ್ ಶಾಸ್ತ್ರಿ, ಟಿ.ಜೆ.ಮುರುಗೇಶಪ್ಪ, ವಿಶ್ವನಾಥ್ ಇಂಜಿನಿಯರ್, ಕರಿಬಸಪ್ಪ ಕಂಚಿಕೇರಿ, ರಾಜು ಖಿರೋಜಿ, ಪ್ರಮೀಳಾ ನಲ್ಲೂರು, ಅಂಜನಾ ಖಟಾವಕರ್, ಶಾರದ ಶಾಸ್ತ್ರಿ, ಜಯಶ್ರೀ ಮೆಹೆರವಾಡೆ, ನಾಗರತ್ನ ಅಂಬಾಸಾ, ಸಂಗೀತಾ ಐರಣಿ, ಅರುಣಾ ಗಂಗಾಧರ್, ವೀಣಾ ದೀಕ್ಷಿತ್, ಪದ್ಮಾವತಿ ಬೊಂಗಾಳೆ ಇತರರು ಇದ್ದರು.