ಜಿಲ್ಲೆ

ರಾಜನಹಳ್ಳಿಯಲ್ಲಿ ಇಂದಿನಿಂದ ವಾಲ್ಮೀಕಿ ಜಾತ್ರೆ

ಹರಿಹರ: ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಫೆ. 8 ಮತ್ತು 9 ರಂದು 2ನೇ ವಾಲ್ಮೀಕಿ ಜಾತ್ರಾ ಮಹೋತ್ಸವವನ್ನು ಆಯೋಜಿಸಲಾಗಿದ್ದು ಸಿದ್ಧತೆಗಳು ಪೂರ್ಣಗೊಂಡಿವೆ. ಜಾತ್ರೆಗೆ ಸುಮಾರು 2 ಲಕ್ಷ ಜನರು ನಾಡಿನ ವಿವಿಧೆಡೆಯಿಂದ ಆಗಮಿಸುವ ನಿರೀಕ್ಷೆಯಿದ್ದು, ಮಠದ ಆವರಣದಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.

ವೇದಿಕೆ 100 ಅಡಿ ಅಗಲ, 50 ಅಡಿ ಉದ್ದವಿದೆ. ಮುಂಭಾಗದಲ್ಲಿ 260 ಅಡಿ ಅಗಲ, 450 ಅಡಿ ಉದ್ದದ ಬೃಹತ್ ಪೆಂಡಾಲ್ ಹಾಕಲಾಗಿದೆ. 50 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಸರ್ಕಾರದಿಂದ ಪರಿಶಿಷ್ಟ ಪಂಗಡದ ಜನರಿಗೆ ವಿವಿಧ ಇಲಾಖೆಗಳಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸುವ 30 ಮಳಿಗೆಗಳನ್ನು ನಿರ್ಮಿಸಲಾಗಿದೆ. ವಾರ್ತಾ ಇಲಾಖೆಯ ಇನ್ನೊಂದು ಮಳಿಗೆಯಲ್ಲಿ ಸರ್ಕಾರದ ವಿವಿಧ ಯೋಜನೆಗಳ ವಿವರ ಒದಗಿಸಲಾಗಿದೆ.

ಎರಡು ದಿನಗಳ ಈ ಜಾತ್ರೆಯಲ್ಲಿ ರಾಜ್ಯಮಟ್ಟದ ಮಹಿಳಾ ಜಾಗೃತಿ ಸಮಾವೇಶ, ಮಹಿಳಾ ಸಾಧಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ, ರಾಜ್ಯಮಟ್ಟದ ನೌಕರರ ಸಮ್ಮೇಳನ, ಶೈಕ್ಷಣಿಕ, ಕೌಟುಂಬಿಕ, ಆಧ್ಯಾತ್ಮಿಕ ವಿಚಾರಗೋಷ್ಠಿಗಳ ಜತೆಗೆ ನೂರಾರು ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ವಿವಿಧ ಮಠಾಧೀಶರು, ಸಚಿವರು, ಶಾಸಕರು, ಮುಖಂಡರು ಭಾಗವಹಿಸಲಿದ್ದಾರೆ.

ಊಟದ ಮೆನು: ಜೋಳದರೊಟ್ಟಿ, ಪಲ್ಯ, ಚಟ್ನಿಪುಡಿ, ಉತ್ತರ ಕರ್ನಾಟಕದ ಸಿಹಿ ಸಜ್ಜಕ, ಪಾಯಸ, ಅನ್ನ, ಸಾಂಬಾರ್ ಇವು ಊಟದ ಮೆನು. ಜತೆಗೆ ಉಪಾಹಾರದ ವ್ಯವಸ್ಥೆಯೂ ಇದೆ. ಊಟಕ್ಕಾಗಿ 35 ಕೌಂಟರ್‌ಗಳನ್ನು ಮಾಡಲಾಗಿದೆ. 300 ಬಾಣಸಿಗರು ಅಡುಗೆ ತಯಾರಿ ನಡೆಸಿದ್ದಾರೆ.

ಪೊಲೀಸ್ ಬಂದೋಬಸ್ತ್: ಜಾತ್ರೆಯ ಬಂದೋಬಸ್ತ್‌ಗೆ ಐವರು ಡಿವೈಎಸ್ಪಿಗಳು, 8 ಸಿಪಿಐ, 30 ಪಿಎಸ್‌ಐಗಳು, 80 ಎಎಸ್‌ಐ, 400 ಮಂದಿ ಪೇದೆಗಳು, ಗೃಹರಕ್ಷಕ ದಳದ 250 ಸಿಬ್ಬಂದಿ ನಿಯೋಜಿಸಲಾಗಿದೆ. ಮಠದ ಸುತ್ತ 18 ಸಿಸಿ ಕ್ಯಾಮರಾಗಳಿವೆ.