ಹರಿಹರದ ಮದ್ಯದಂಗಡಿ ಮುಂದೆ ಸೋಮವಾರ ಬೆಳಗ್ಗೆ ಸರದಿಯಲ್ಲಿ ನಿಂತಿರುವುದು. 
ಜಿಲ್ಲೆ

ಹರಿಹರದಲ್ಲೂ ಸೋಲ್ಡ್‌ಔಟ್

Davanagere

ಹರಿಹರ: ನಗರದ 8, ಗ್ರಾಮೀಣ ಭಾಗದ 14 ಮದ್ಯದಂಗಡಿಗಳು ಸೋಮವಾರ ತೆರೆದಿದ್ದವು. ಬೆಳಗ್ಗೆ 8 ಗಂಟೆಯಿಂದಲೇ ಅಂಗಡಿ ಮುಂದೆ ಜನ ಸಾಲುಗಟ್ಟಿ ನಿಂತಿದ್ದರು.
ಅಂಗಡಿಗಳ ಮುಂದೆ ಮಾರ್ಕಿಂಗ್ ಮಾಡಿ ಬ್ಯಾರಿಕೇಡ್ ಹಾಕಲಾಗಿತ್ತು. ನೂಕು ನುಗ್ಗಲಾಗದಂತೆ, ಅಂತರ ಕಾಪಾಡಲು ಪೊಲೀಸರು ಹರಸಾಹಸಪಟ್ಟರು.
ಬಿಸಿಲ ಝಳವನ್ನೂ ಲೆಕ್ಕಿಸದೇ ಜನ ಉದ್ದ ಸಾಲುಗಟ್ಟಿ ನಿಂತಿದ್ದರು. ಅಂತರ ಕಾಪಾಡದ, ಸಾಲಲ್ಲಿ ಮಧ್ಯೆ ಬಂದು ತೂರಿಕೊಳ್ಳುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.
ಸ್ಟಾಕ್ ಬಹುತೇಕ ಖಾಲಿಯಾಯಿತು. ಕೆಲವರು ತಮ್ಮ ಬ್ರಾೃಂಡ್ ಸಿಗದಿದ್ದಕ್ಕೆ ಸಿಕ್ಕಿದ್ದನ್ನು ಖರೀದಿಸಿದರು. ಮಾರಾಟವಾಗದೇ ಉಳಿದ ಸರಕು ಮಾರಾಟ ಮಾಡಿದ ತೃಪ್ತಿ ಅಂಗಡಿ ಮಾಲೀಕರಲ್ಲಿ ಕಂಡು ಬಂತು.
ಕೆಲ ಮದ್ಯದಂಗಡಿಗಳಲ್ಲಿ 30 ರಿಂದ 50 ರೂ. ವರೆಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದರು. ಬಿಲ್ ಕೊಡುತ್ತಿರಲಿಲ್ಲ. ಇದನ್ನು ತಡೆಯಬೇಕಾದ ಅಬಕಾರಿ ಪೊಲೀಸರು ಅಂಗಡಿ ಮುಂದೆ ಕಾಣಲಿಲ್ಲ.
ಮಿಟ್ಲಕಟ್ಟೆಯಲ್ಲಿ ಪ್ರತಿಭಟನೆ: ದಾವಣಗೆರೆಯಿಂದ ಮದ್ಯ ಖರೀದಿಸಲು ಹರಿಹರ ತಾಲೂಕಿನ ಜರೀಕಟ್ಟೆ ಗ್ರಾಮಕ್ಕೆ ತೆರಳುತ್ತಿದ್ದವರನ್ನು ಮಿಟ್ಲಕಟ್ಟೆ ಗ್ರಾಮಸ್ಥರು ತಡೆದು ಪ್ರತಿಭಟಿಸಿದರು. ಸ್ಥಳಕ್ಕೆ ಧಾವಿಸಿದ ಗ್ರಾಮಾಂತರ ಪೊಲೀಸರು ಮನವೊಲಿಸಿ ಪ್ರತಿಭಟನೆ ಅಂತ್ಯಗೊಳಿಸಿದರು. ನಂತರ ಗ್ರಾಮದ ಮಾವಿನ ತೋಪುವಿನಲ್ಲಿ ಗುಂಪು ಗುಂಪಾಗಿ ಕುಳಿತು ಗುಂಡೇರಿಸುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.