ಜಿಲ್ಲೆ

ಜನಸಂಖ್ಯಾ ಹೆಚ್ಚಳ ಅಭಿವೃದ್ಧಿಗೆ ಮಾರಕ

Davangere - Desk - Basavaraja P

ಹರಿಹರ: ಜನಸಂಖ್ಯಾ ಹೆಚ್ಚಳ ಅಭಿವೃದ್ಧಿಗೆ ಮಾರಕವಾಗಲಿದೆ. ನಿಯಂತ್ರಣ ಮಾಡದಿದ್ದರೆ ಭವಿಷ್ಯದಲ್ಲಿ ಹಲವಾರು ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಶಾಸಕ ಬಿ.ಪಿ. ಹರೀಶ್ ಕಳವಳ ವ್ಯಕ್ತಪಡಿಸಿದರು.

ನಗರದ ಹರ್ಲಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಜನಸಂಖ್ಯಾ ಹೆಚ್ಚಳದ ಪರಿಣಾಮ ದೇಶದಲ್ಲಿ ವಸತಿ, ಶಿಕ್ಷಣ ಮತ್ತಿತರ ಸಂಪನ್ಮೂಲಗಳ ಕೊರತೆ ಉಂಟಾಗುತ್ತಿದೆ. ವಾಯು, ಜಲ ಮತ್ತು ಶಬ್ದ ಮಾಲಿನ್ಯ. ನಗರಗಳಲ್ಲಿ ಕೊಳಚೆ ಪ್ರದೇಶಗಳ ಉಲ್ಬಣ, ಸಾರಿಗೆ ವ್ಯವಸ್ಥೆಯಲ್ಲಿ ಒತ್ತಡ ಹೆಚ್ಚಾಗುತ್ತದೆ. ಇವುಗಳಿಂದ ಮುಕ್ತಿ ಹೊಂದಲು ಜನಸಂಖ್ಯಾ ನಿಯಂತ್ರಣ ಪರಿಹಾರ ಎಂದರು.

ಆರೋಗ್ಯ ಇಲಾಖೆಯೊಂದಿಗೆ ಇತರೆ ಇಲಾಖೆಯ ಸಹಯೋಗದೊಂದಿಗೆ ಕುಟುಂಬ ಕಲ್ಯಾಣ ಪದ್ಧತಿಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಜನಸಂಖ್ಯೆಯಲ್ಲಿ ಮಾಡಿ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಒಂದು ಬಂಡಿಯ ಎರಡು ಗಾಲಿಗಳಿದ್ದಂತೆ. ಒಂದು ಗಾಲಿ ಕುಂಠಿತಗೊಂಡರೆ, ಇನ್ನೊಂದು ಗಾಲಿಯಿಂದ ಬಂಡಿಯು ಸಾಗುವುದು ಅಸಾಧ್ಯ. ಆದ್ದರಿಂದ ಪ್ರತಿ ಮಗುವಿಗೆ ಶಿಕ್ಷಣದ ಅವಶ್ಯಕ ಇದೆ. ಶಿಕ್ಷಣ ಪಡೆದರೆ ತನ್ನಷ್ಟಕ್ಕೆ ತಾನೇ ಜನಸಂಖ್ಯೆ ನಿಯಂತ್ರಣವಾಗುತ್ತದೆ ಎಂದು ಹೇಳಿದರು.

ತಾಲೂಕು ಆರೋಗ್ಯ ಅಧಿಕಾರಿ ಡಾ. ಅಬ್ದುಲ್ ಖಾದರ್ ಮಾತನಾಡಿ, ಜನಸಂಖ್ಯೆ ನಿಯಂತ್ರಿಸಲು ಮಹಿಳೆಯರಿಗೆ ನುಂಗುವ ಮಾತ್ರೆಗಳು, ವಂಕಿ ಅಳವಡಿಕೆ, ಅಂತರ ಚುಚ್ಚುಮದ್ದು, ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಹಾಗೂ ಪುರುಷರಿಗಾಗಿ ಸಂತಾನ ಹರಣ ಶಸ್ತ್ರಚಿಕಿತ್ಸೆ ತಾತ್ಕಾಲಿಕ ಹಾಗೂ ಶಾಶ್ವತ ವಿಧಾನದ ಬಗ್ಗೆ ಮಾಹಿತಿ ನೀಡಿದರು.

ಉಪನ್ಯಾನಕ ಡಾ.ತಿಪ್ಪೇಸ್ವಾಮಿ ಮಾತನಾಡಿ, ಭಾರತದ ಜನಸಂಖ್ಯೆ ಹೆಚ್ಚಳಕ್ಕೆ ಆಚಾರ ಸಂಪ್ರದಾಯಗಳು ಕಾರಣವಾಗಿವೆ. ಶಿಕ್ಷಣ ಆಚಾರ ಸಂಪ್ರದಾಯಗಳು ಒಟ್ಟೊಟ್ಟಿಗೆ ಸಾಗಿದರೆ ಜನಸಂಖ್ಯೆ ನಿಯಂತ್ರಣವಾಗುತ್ತದೆ. ಆದರೆ, ಶಿಕ್ಷಣ, ಆಚಾರ, ಸಂಪ್ರದಾಯಗಳು ವಿರುದ್ಧ ದಿಕ್ಕಿನಲ್ಲಿ ನಡೆದರೆ ತನ್ನಷ್ಟಕ್ಕೆ ತಾನೇ ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.

ನಗರಸಭಾ ಆವರಣದಿಂದ ಜನಸಂಖ್ಯಾ ಸ್ಫೋಟ ಜಾಗೃತಿ ಜಾಥಾಕ್ಕೆ ಶಾಸಕರು ಚಾಲನೆ ನೀಡಿದರು. ಜಾಥಾವು ಹಳೇ ಪಿಬಿ ರಸ್ತೆ, ಗಾಂಧಿ ವೃತ್ತ, ಹರಪನಹಳ್ಳಿ ರಸ್ತೆ ಮೂಲಕ ಸಾಗಿ ಹರ್ಲಾಪುರದ ಪ್ರಾಥಮಿಕ ಆರೋಗ್ಯಕ್ಕೆ ಬಂದು ತಲುಪಿತು.

ತಾಪಂ ಇಒ ರಾಮಕೃಷ್ಣಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಶೀದಾ ಬಾನು, ಎಸ್‌ಐ ವಿಜಯಕುಮಾರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಉಮ್ಮಣ್ಣ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್, ಡಾ.ಕಲ್ಲೇಶ್, ಶಶಿಕಾಂತ್ ಇತರರಿದ್ದರು.