ಹರಿಹರದ ಗುತ್ತೂರು ಹಾಸ್ಟೆಲ್‌ನಲ್ಲಿ ಹೊರರಾಜ್ಯದಿಂದ ಬಂದವರನ್ನು ಕ್ವಾರಂಟೈನ್‌ನಲ್ಲಿಡಲು ವಿರೋಧಿಸುತ್ತಿರುವ ಗ್ರಾಮಸ್ಥರು.  
ಜಿಲ್ಲೆ

ಕ್ವಾರಂಟೈನ್ ಮಾಡಲು ಅಧಿಕಾರಿಗಳ ಹರಸಾಹಸ

Davanagere

ಹರಿಹರ: ಗುಜರಾತ್‌ನಿಂದ ಬಂದಿದ್ದರು ಎನ್ನಲಾದ ಕುಟುಂಬವೊಂದರ ಮೂವರು ಸೇರಿ ನಾಲ್ವರನ್ನು ಭಾನುವಾರ ಕ್ವಾರಂಟೈನ್‌ನಲ್ಲಿಡಲು ಅಧಿಕಾರಿಗಳು ಹರಸಾಹಸಪಟ್ಟರು.
ನಗರದ ಇಂದಿರಾ ನಗರದಲ್ಲಿ ಈ ಕುಟುಂಬ ವಾಸವಿದೆ. ಮಗಳು, ಅಳಿಯ, ಮೊಮ್ಮಗ ಗುಜರಾತಿನಿಂದ ಶನಿವಾರ ವಾಪಸ್ ಇಲ್ಲಿಗೆ ಬಂದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಬಡಾವಣೆಯೊಂದರ ನಾಗರಿಕರು ಅಧಿಕಾರಿಗಳ ಗಮನಕ್ಕೆ ತಂದರು.
ಭಾನುವಾರ ಬೆಳಗ್ಗೆ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಈ ಮೂವರು, ಮಹಾರಾಷ್ಟ್ರದ ಇನ್ನೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ಗುತ್ತೂರಿನ ಹಾಸ್ಟೆಲ್‌ನಲ್ಲಿಡಲು ಪ್ರಯತ್ನ ಮಾಡಿದರು.
ಗುತ್ತೂರು ಗ್ರಾಮಸ್ಥರು ಶಂಕಿತರನ್ನು ಇಲ್ಲಿಡಬಾರದು ಎಂದು ತಕರಾರು ಮಾಡಿದರು. ಸ್ಥಳಕ್ಕಾಗಮಿಸಿದ ಮಾಜಿ ಶಾಸಕ ಬಿ.ಪಿ.ಹರೀಶ್, ನಂತರ ಶಾಸಕ ಎಸ್.ರಾಮಪ್ಪ ಅವರು ಜನರ ಮನವೊಲಿಸಲು ಯತ್ನಿಸಿ ವಿಫಲರಾದರು. ನಂತರ ಅಧಿಕಾರಿಗಳ ತಂಡ ಕೊಂಡಜ್ಜಿ ಹಾಸ್ಟೆಲ್ ಕಡೆಗೆ ಹೊರಟಿತು.
ಸುದ್ದಿ ತಿಳಿದ ಕೊಂಡಜ್ಜಿ ಗ್ರಾಮಸ್ಥರು ಊರ ಬಾಗಿಲಲ್ಲೇ ಬೈಕ್‌ಗಳನ್ನು ಅಡ್ಡಲಾಗಿ ನಿಲ್ಲಿಸಿ ವಾಪಸ್ ಕರೆದೊಯ್ಯುವಂತೆ ಆಗ್ರಹಿಸಿದರು. ಕೊಂಡಜ್ಜಿಯ ಹಾಸ್ಟೆಲ್ ಕ್ವಾರಂಟೈನ್‌ಗೆ ಸೂಕ್ತವಾಗಿಲ್ಲ ಎಂದು ಮಾಹಿತಿ ಪಡೆದು ತಂಡ ಮರಳಿತು.
ನಂತರ ಪುನಃ ಜನರ ಮನವೊಲಿಸಿ ಗುತ್ತೂರಿನ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿಡಲು ಅಧಿಕಾರಿಗಳ ತಂಡ ಪ್ರಯತ್ನಿಸಿ ವಿಫಲವಾಯಿತು. ಕೊನೆಗೆ ಹರಿಹರದ ಖಾಸಗಿ ವಸತಿ ಗೃಹದಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಗಂಟಲು ದ್ರವ ಪರೀಕ್ಷೆ: ಈ ನಾಲ್ವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಫಲಿತಾಂಶ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ತಹಸೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಟಿಎಚ್‌ಒ ಡಾ.ಚಂದ್ರಮೋಹನ್, ಸಿಪಿಐ ಶಿವಪ್ರಸಾದ್, ಗ್ರಾಮಾಂತರ ಪಿಎಸ್‌ಐ ರವಿಕುಮಾರ್ ಇತರರಿದ್ದರು.