ಹರಿಹರ: ಗಾಂಧೀಜಿ ಸತ್ಯ, ಅಹಿಂಸೆ, ಶಾಸ್ತ್ರೀಜಿ ಪ್ರಾಮಾಣಿಕತೆ, ದೃಢತೆ, ಸರಳತೆಯ ಸಂದೇಶವನ್ನು ಜಗತ್ತಿಗೆ ನೀಡಿದ್ದಾರೆ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.
ನಗರದಲ್ಲಿ ಬುಧವಾರ ತಾಲೂಕು ಆಡಳಿತ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರೀಜಿ ಜನ್ಮದಿನಾಚರಣೆಯಲ್ಲಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ, ಮಾತನಾಡಿದರು.
ಮಹಾತ್ಮ ಗಾಂಧಿ ಅವರ ಗುಡಿಸಲು ಮುಕ್ತ ಹಾಗೂ ಸ್ವಚ್ಛ ಭಾರತದ ಕಲ್ಪನೆ ಬಹುತೇಕ ಈಡೇರಿದೆ. ಸ್ವಾತಂತ್ರ್ಯಪೂರ್ವದಲ್ಲಿ ದೇಶ ಆರ್ಥಿಕವಾಗಿ ಹಿಂದುಳಿದಿತ್ತು. ಬಹುತೇಕ ಗ್ರಾಮಗಳು ಗುಡಿಸಲಿನಿಂದ ಹಾಗೂ ನಗರ ಪ್ರದೇಶಗಳು ಕೊಳಚೆಯಿಂದ ಕೂಡಿದ್ದವು. ಪ್ರಸ್ತುತ ದಿನಗಳಲ್ಲಿ ಶೇ. 95 ರಷ್ಟು ಬದಲಾಗಿದೆ. ಪ್ರಧಾನ ಮಂತ್ರಿ ಅವರ ಕರೆ ಮೇರೆಗೆ ದೇಶಾದ್ಯಂತ ಸೆ. 14ರಿಂದ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ ಎಂದರು.
ಪ್ರಸ್ತುತ ದೇಶ ಆರ್ಥಿಕವಾಗಿ ಸದೃಢವಾಗಿದ್ದು, ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದೆ. ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ಜ್ಞಾಪಕಾರ್ಥವಾಗಿ ದೇಶದ ಸುಮಾರು 100 ನಗರಗಳಲ್ಲಿ ಅಮೃತ ಯೋಜನೆಯಡಿ ವಿವಿಧ ಕಾರ್ಯಕ್ರಮಗಳನ್ನು ಪ್ರಧಾನ ಮಂತ್ರಿ ಅವರು ವರ್ಚುವಲ್ ಉದ್ಘಾಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದರಲ್ಲಿ ತಾಲೂಕಿನ ಮಲೇಬೆನ್ನೂರು ಸೇರಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ತಹಸೀಲ್ದಾರ್ ಕೆ.ಎಂ.ಗುರುಬಸವರಾಜ್ ಮಾತನಾಡಿ, ಗಾಂಧೀಜಿ ಮತ್ತು ಲಾಲ್ ಬಹಾದೂರ್ ಶಾಸ್ತ್ರೀಜಿ ಈ ದೇಶದ ಶಕ್ತಿ. ಅವರ ಜೀವನ ಶೈಲಿಯನ್ನು ನಾವೆಲ್ಲ ರೂಢಿಸಿಕೊಳ್ಳಬೇಕಿದೆ ಎಂದರು. ತಾಪಂ ಇಒ ಎಸ್.ಪಿ.ಸುಮಲತಾ, ಬಿಇಒ ದುರುಗಪ್ಪ, ಟಿಎಚ್‌ಒ ಡಾ. ಖಾದರ್ ಇತರರಿದ್ದರು.