ಹರಿಹರ: ಸರ್ಕಾರದ ಕುಟುಂಬ ಕಲ್ಯಾಣ ಯೋಜನೆಗಳನ್ನು ಅನುಸರಿಸುವ ಮೂಲಕ ಜನಸಂಖ್ಯೆ ನಿಯಂತ್ರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಡಿ.ಚಂದ್ರಮೋಹನ್ ಹೇಳಿದರು.
ನಗರದ ಟಿಎಚ್‌ಒ ಕಚೇರಿ ಮುಂಭಾಗ ಭಾನುವಾರ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಶ್ವ ಜನಸಂಖ್ಯೆ ದಿನಾಚರಣೆ ಕುರಿತು ಧ್ವನಿವರ್ಧಕದ ಮೂಲಕ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ಜನಸಂಖ್ಯೆ ಶರವೇಗದಲ್ಲಿ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಚೀನಾ ದೇಶವನ್ನು ಹಿಂದಿಕ್ಕಿದರೂ ಅಚ್ಚರಿ ಪಡಬೇಕಿಲ್ಲ. ಜನಸಂಖ್ಯೆ ಹೆಚ್ಚಳದಿಂದ ಶಿಕ್ಷಣ, ನೀರು, ಆಹಾರ ಕೊರತೆಯಾಗುತ್ತದೆ. ಆರೋಗ್ಯ ನಿರ್ವಹಣೆಯಂಥ ಹಲವು ಸಮಸ್ಯೆಗಳನ್ನು ಸಮಾಜ ಎದುರಿಸಬೇಕಾಗುತ್ತದೆ. ಸಮುದಾಯದ ಎಲ್ಲರೂ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಳವಡಿಸಿಕೊಂಡು ಜನಸಂಖ್ಯಾ ನಿಯಂತ್ರಣ ಮಾಡಬೇಕು ಎಂದು ಸಲಹೆ ನೀಡಿದರು.
ಜನಸಂಖ್ಯಾ ಸ್ಫೋಟದಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಲದೇ ಹಲವು ಕುಟುಂಬಗಳಿಗೆ ಸಿಗಬೇಕಾದ ಮೂಲ ಸೌಲಭ್ಯ ಸಿಗದೇ ವಂಚಿತರಾಗುತ್ತಾರೆ. ಚಿಕ್ಕ ಕುಟುಂಬ, ಸುಖಿಃ ಕುಟುಂಬ, ನಾವಿಬ್ಬರು ನಮಗೊಬ್ಬರು ಎಂಬ ಘೋಷಣೆಗಳಂತೆ ನಡೆದುಕೊಂಡಲ್ಲಿ ದೇಶ ಒಳ್ಳೆಯ ದಿಕ್ಕಿನೆಡೆಗೆ ಸಾಗುತ್ತದೆ ಎಂದರು.
ಹಿರಿಯ ಆರೋಗ್ಯ ಸಹಾಯಕರಾದ ಮಂಜುನಾಥ್ ಹೊರಕೇರಿ, ಎಂ.ಉಮ್ಮಣ್ಣ. ದಾದಾಪೀರ್, ಎಸ್.ಎಚ್.ಪಾಟೀಲ್, ರುದ್ರೇಶ್, ಆರೋಗ್ಯ ಇಲಾಖೆ ಸಿಬ್ಬಂದಿ ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಭಾಗವಹಿಸಿದ್ದರು.
ಆರೋಗ್ಯ ಹಿರಿಯ ಸಹಾಯಕ ಮಂಜುನಾಥ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.