ಜಿಲ್ಲೆ

ದೇವರಬೆಳಕೆರೆಯಲ್ಲಿ ಹೂಳು ಭರ್ತಿ

Davangere - Desk - Basavaraja P

ಕಾಲುವೆ, ಜಮೀನಿಗೆ ಹರಿಯದ ನೀರು I ನೀರಾವರಿ ಇಲಾಖೆ ನಿರ್ಲಕ್ಷ್ಯ

ಹರಿಹರ: ನಗರದ ಹೊರವಲಯದಿಂದ ಸಾಗಿರುವ ದೇವರಬೆಳಕೆರೆ ಪಿಕ್‌ಅಪ್ ಜಲಾಶಯದ ಕಾಲುವೆ ಹೂಳು ತುಂಬಿರುವ ಕಾರಣ ನೀರಿದ್ದರೂ ರೈತರ ಜಮೀನುಗಳಿಗೆ ಹರಿಯದ ದುಃಸ್ಥಿತಿ ಎದುರಾಗಿದೆ.

ಉತ್ತಮ ಮಳೆಯಾಗಿದ್ದು, ಡಿ.ಬಿ.ಕೆರೆ ಜಲಾಶಯ ಮೈದುಂಬಿ ಹರಿಯುತ್ತಿದೆ. ಕಾಲುವೆಗಳಿಗೂ ನೀರು ಹರಿಸಲಾಗುತ್ತಿದೆ. ನಗರದ ಅಮರಾವತಿ ಬಳಿ ಇರುವ ಕಾಲುವೆಗೂ ಜಲಾಶಯದ ನೀರು ಹರಿಸಲಾಗುತ್ತಿದೆ.

ಕಡ್ಲೆಗೊಂದಿಯಿಂದ ಶೇರಾಪುರ, ಮಹಜೇನಹಳ್ಳಿ, ಅಮರಾವತಿ, ಗುತ್ತೂರಿನಿಂದ ಮುಂದೆ ಸಾಗುವ ಈ ಕಾಲುವೆಯಲ್ಲಿ ಕಡ್ಲೆಗೊಂದಿಯಿಂದ ಮುಂದಿನವರೆಗೂ ನೀರು ಸರಾಗವಾಗಿ ಹರಿಯುತ್ತಿದ್ದು, ಆ ಭಾಗದ ರೈತರು ಜಮೀನುಗಳಿಗೆ ಹರಿಸುತ್ತಿದ್ದಾರೆ.

ಅಲ್ಲಿಂದ ಮುಂದಿನಭಾಗದಲ್ಲಿ ಹೂಳಿನಿಂದಾಗಿ ನೀರು ಹರಿಯುತ್ತಿಲ್ಲ. ಶೇರಾಪುರ, ಮಹಜೇನಹಳ್ಳಿ, ಅಮರಾವತಿ ಹಾಗೂ ಮುಂದಿನ ಗ್ರಾಮಗಳ ವ್ಯಾಪ್ತಿಯ ಗ್ರಾಮಗಳ ನೂರಾರು ಎಕರೆ ಪ್ರದೇಶಕ್ಕೆ ನೀರು ಸಿಗದಂತಾಗಿದೆ.

ಮೂರು ಕಿ.ಮೀ. ಹೂಳು ತೆರವು: ಮೆಕ್ಕೆಜೋಳ ಮತ್ತಿತರ ಬೆಳೆ ಬೆಳೆದಿರುವ ರೈತರು ಕಾಲುವೆಯಲ್ಲಿ ನೀರು ಹರಿಯದಿರುವುದನ್ನು ಕಂಡು ನೀರಾವರಿ ಇಲಾಖೆ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ.

ಕಾರಣ ಸೋಮವಾರದಿಂದ ರೈತರೇ ಹಣ ಹಾಕಿ ಹಿಟಾಚಿ ಯಂತ್ರದ ಮೂಲಕ ಅಂದಾಜು 3 ಕಿ.ಮೀ.ವರೆಗೆ ಹೂಳು ತೆಗೆಸಿದ್ದಾರೆ. ಆದರೂ ನೀರು ಬಂದಿಲ್ಲ. ನಮ್ಮ ನೋವಿಗೆ ಸ್ಪಂದಿಸುವವರು ಯಾರೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಶೇರಾಪುರ ಭಾಗದಿಂದ ಮೇಲಕ್ಕೆ ಇನ್ನೂ ಮೂರ‌್ನಾಲ್ಕು ಕಿ.ಮೀ. ಕಾಲುವೆಯ ಹೂಳು ತೆಗೆಸಬೇಕಾಗಿದೆ. ಅದಕ್ಕೆ ನೀರಾವರಿ ಇಲಾಖೆ ಮುಂದಾಗುತ್ತಿಲ್ಲ. ಅನುದಾನ ಇಲ್ಲ ಎಂದು ಕೈಚೆಲ್ಲುತ್ತಿದ್ದಾರೆ. ಈಗಾಗಲೇ 60 ಸಾವಿರ ರೂ. ಖರ್ಚಾಗಿದೆ. ಹೂಳು ತೆಗೆಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಅಮರಾವತಿ ಹತ್ತಿರದ ಡಿ.ಬಿ.ಕೆರೆ ಕಾಲುವೆ ಹೂಳು ತೆರವುಗೊಳಿಸುವ ಕಾರ್ಯದ ವೇಳೆ ರೈತರಾದ ಗುತ್ತೂರು ಮಂಜುನಾಥ, ಗೌಡ್ರ ಪುಟ್ಟಪ್ಪ, ಅಮರಾವತಿ ಗಂಗಣ್ಣರ ಬಸಪ್ಪ, ಗುತ್ತೂರು ಬಸವರಾಜ್, ಹರಿಹರದ ಕೆಂಚಪ್ಪ, ಅಮರಾವತಿ ಮಧು, ಸೋಮಣ್ಣ, ಚೇರ್‌ಮನ್ ಬಸಣ್ಣ, ಮಂಜಣ್ಣ ಇತರರಿದ್ದರು.