ಹರಿಹರ: ತಾಲೂಕಿನಲ್ಲಿ ಭಾನುವಾರ ಭಾರಿ ಬಿರುಗಾಳಿ, ಗುಡುಗಿನೊಂದಿಗೆ ಸುರಿದ ಸಾಧಾರಣ ಮಳೆಗೆ ವಿದ್ಯುತ್‌ಕಂಬ ಹಾಗೂ ಮರಗಳು ಧರೆಗುರುಳಿವೆ.
ಕೆಲವೆಡೆ ಮನೆಗಳ ಮೇಲೆ ಅಕ್ಕ-ಪಕ್ಕದ ಕಟ್ಟಡಗಳ ಮೇಲಿನ ವಸ್ತುಗಳು ಬಿದ್ದು ಹೆಂಚುಗಳು ಒಡೆದಿವೆ. ಬಿರುಸಾದ ಗಾಳಿಗೆ ಎಲೆ-ಬಳ್ಳಿ, ತೆಂಗು, ಅಡಕೆ, ಭತ್ತ ಹಾಗೂ ಇತರೆ ತೋಟಗಾರಿಕೆ ಬೆಳೆಗಳಿಗೆ ಹಾನಿಗೀಡಾಗಿವೆ.
ಕಂಬಗಳು ಧರೆಗೆ: ನಗರದ ವಿವಿಧೆಡೆ ಸಾಲು ಮರಗಳ ರಂಬೆಗಳು ಬಿದ್ದಿವೆ. ನಗರದಲ್ಲಿ ಹತ್ತು ಕಂಬಗಳು ನೆಲಕ್ಕೆ ಬಿದ್ದಿವೆ. ಸಂಜೆ 4.30 ರಿಂದಲೇ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಡಿತವಾಗಿತ್ತು.
ಲಾಕ್‌ಡೌನ್‌ನಿಂದ ಈಗಾಗಲೇ ನಗರದ ರಸ್ತೆಗಳು ಬಿಕೋ ಎನ್ನುತ್ತಿವೆ. ಗಾಳಿ ಮಳೆಯಿಂದ ರಸ್ತೆಗಳು ಇನ್ನಷ್ಟು ನಿರ್ಜನವಾಗಿದ್ದವು. ಗಾಂಧಿ ವೃತ್ತ ಹಾಗೂ ಇತರೆಡೆ ಪೊಲೀಸ್ ಚೆಕ್‌ಪೋಸ್ಟ್‌ಗಳಲ್ಲಿ ಹಾಕಿದ್ದ ಶಾಮಿಯಾನ ಉರುಳಿದ್ದವು.