ಜಿಲ್ಲೆ

ಹರಿಹರದ ಆರೋಗ್ಯ ಮಾತೆ ಬಸಿಲಿಕ ಚರ್ಚ್‌ನ ವಾರ್ಷಿಕೋತ್ಸವ

ಹರಿಹರ: ನಗರದ ಆರೋಗ್ಯ ಮಾತೆ ಬಸಿಲಿಕ ಚರ್ಚ್‌ನ ವಾರ್ಷಿಕ ಮಹೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಧ್ವಜಾರೋಹಣದ ಮೂಲಕ ಬುಧವಾರ ಸಂಜೆ ಚಾಲನೆ ನೀಡಿದರು.

ಮಾತನಾಡಿದ ಅವರು, ಕ್ರೈಸ್ತ ಸಮುದಾಯಕ್ಕೆ ಹರಿಹರದ ಚರ್ಚ್ ಪುಣ್ಯಕ್ಷೇತ್ರವಾಗಿ ರೂಪಿತವಾಗಿದೆ. ಇಲ್ಲಿನ ಮಹೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುವುದು ವಿಶೇಷವಾಗಿದೆ ಎಂದರು.

ನಾವು ಬಾಲ್ಯದಿಂದಲೂ ಈ ದೇವಾಲಯದ ಬಗ್ಗೆ ಆಪಾರ ಗೌರವ ಹೊಂದಿದ್ದೇವೆ. ಇಂದಿನಿಂದ ಆರಂಭವಾಗಿರುವ ಮಹೋತ್ಸವದಿಂದ ಸರ್ವ ಭಕ್ತರಿಗೂ ಒಳಿತಾಗಲಿ ಎಂದು ತಿಳಿಸಿದರು.

ಶಿವಮೊಗ್ಗ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೋ ಆಶೀರ್ವಚನ ನೀಡಿದರು. ಚರ್ಚ್‌ನ ಪ್ರಧಾನ ಧರ್ಮಗುರು ಫಾದರ್ ಕೆ.ಎ. ಜಾರ್ಜ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ತಾಪಂ ಮಾಜಿ ಸದಸ್ಯ ಹಾಲೇಶ್ ಗೌಡ ಭಾಗವಹಿಸಿದ್ದರು.

ಬುಧವಾರದಿಂದ ಸೆ. 9ರ ವರೆಗೆ ಚರ್ಚ್‌ನಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸೆ.8ರಂದು ಸಂಜೆ ನಡೆಯುವ ಪುಷ್ಪಾಲಂಕೃತ ತೇರಿನ ಮೆರವಣಿಗೆಯಲ್ಲಿ ಸಹಸ್ರಾರು ಜನರು ಭಾಗವಹಿಸುವರು.