ಹರಿಹರ: ಶಿವಮೊಗ್ಗ-ಹೊಸಪೇಟೆ ಹಾಗೂ ಬೀರೂರು-ಸಮ್ಮಸಗಿ (ಹಳೆ ಪಿ.ಬಿ ರಸ್ತೆ) ರಾಜ್ಯ ಹೆದ್ದಾರಿಯ ಹರಿಹರ ನಗರ ವ್ಯಾಪ್ತಿಯಲ್ಲಿರುವ ಅವೈಜ್ಞಾನಿಕ ರಸ್ತೆ ಹಂಪ್ಸ್‌ಗಳನ್ನು (ವೇಗ ನಿಯಂತ್ರಕ) ತಕ್ಷಣವೇ ತೆರವುಗೊಳಿಸುವಂತೆ ಒತ್ತಾಯಿಸಿ, ಹನಗವಾಡಿ ಗ್ರಾಮ ಪಂಚಾಯತಿ ಸದಸ್ಯ ಪ್ರವೀಣ್ ಹನಗವಾಡಿ ಅವರು ಸೋಮವಾರ ಶಿರಸ್ತೇದಾರ್ ಹರ್ಷವರ್ಧನ್ ಅವರಿಗೆ ಮನವಿ ಸಲ್ಲಿಸಿದರು.
ಸಂಚಾರಕ್ಕೆ ಅಡ್ಡಿ, ಅಪಘಾತಗಳ ಹೆಚ್ಚಳ
ನಂತರ ಮಾತನಾಡಿದ ಪ್ರವೀಣ್ ಹನಗವಾಡಿ ಅವರು, ನಗರ ವ್ಯಾಪ್ತಿಯಲ್ಲಿ ಹಲವು ಭಾಗಗಳಲ್ಲಿ ಹಾಕಿರುವ ಅವೈಜ್ಞಾನಿಕ ರೋಡ್ ಹಂಪ್ಸ್‌ಗಳು ಪ್ರತಿನಿತ್ಯ ವಾಹನ ಸವಾರರ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿವೆ. ಇದರಿಂದಾಗಿ ಅಪಘಾತಗಳು ಸಂಭವಿಸಿದ ವರದಿಗಳೂ ಇವೆ ಎಂದರು.
ನಿಯಮ ಉಲ್ಲಂಘನೆ ಆರೋಪ
ರಾಜ್ಯ ಹೆದ್ದಾರಿಯಲ್ಲಿ ಲೋಕೋಪಯೋಗಿ ಇಲಾಖೆಯವರು ರಸ್ತೆ ನಿರ್ಮಿಸುವಾಗ ಆಯ್ದ ಭಾಗಗಳಲ್ಲಿ ಮಾತ್ರ ವೈಜ್ಞಾನಿಕ ರೀತಿಯಲ್ಲಿ ಹಂಪ್ಸ್‌ಗಳನ್ನು ಅಳವಡಿಸಬೇಕು.
ಆದರೆ, ಅಧಿಕಾರಿಗಳು ಯಾವುದೇ ನಿಯಮ ಪಾಲಿಸದೆ, ಮನಬಂದಂತೆ ಮತ್ತು ಕೆಲವರ ಅನುಕೂಲಕ್ಕೆ ತಕ್ಕಂತೆ ಈ ಹಂಪ್ಸ್‌ಗಳನ್ನು ಹಾಕಿರುತ್ತಾರೆ. ಇದು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವರು ಆರೋಪಿಸಿದರು.
ಯಾವ ಸ್ಥಳಗಳಲ್ಲಿ ಹಂಪ್ಸ್ ಇರಬೇಕು?:
ನಿಯಮದ ಪ್ರಕಾರ, ಶಾಲೆ, ಆಸ್ಪತ್ರೆ, ನ್ಯಾಯಾಲಯ (ಕೋರ್ಟ್) ಮತ್ತು ಅಪಾಯ ಸಂಭವಿಸುವ ಸ್ಥಳಗಳಲ್ಲಿ ಮಾತ್ರ ವೈಜ್ಞಾನಿಕ ರಸ್ತೆ ಹಂಪ್ಸ್‌ಗಳನ್ನು ನಿರ್ಮಿಸಬೇಕು.
ತಾಲೂಕಿನ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಯಾವ ನಿಯಮದ ಪ್ರಕಾರ ಈ ರೀತಿಯ ಹಂಪ್ಸ್‌ಗಳನ್ನು ನಿರ್ಮಿಸಿದ್ದಾರೆ ಎನ್ನುವುದು ತಿಳಿಯದಂತಾಗಿದೆ.
ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಹಾಗೂ ಅವಶ್ಯಕತೆ ಇಲ್ಲದ ಹಂಪ್ಸ್‌ಗಳನ್ನು ತೆರವುಗೊಳಿಸಿ, ಅಗತ್ಯ ಇರುವ ಕಡೆ ವೈಜ್ಞಾನಿಕವಾಗಿ ಮರು-ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಚಂದ್ರಗೌಡ ಹರಗನಹಳ್ಳಿ, ನಾಗರಾಜ್ ದೊಗ್ಗಳ್ಳಿ, ಹನುಮಂತಪ್ಪ ರಾಟಿ, ಸಿದ್ದೇಶ್ ಮಾಕನೂರ್ ಸೇರಿದಂತೆ ಇತರರು ಹಾಜರಿದ್ದರು.