ಬಸವಂತರಾಯ ಕುರಿ 
ಜಿಲ್ಲೆ

ಹರಿ ನೀರಾವರಿ ಮೂಲಕ ನೀರು ಹರಿಸಿ- ವೀವಿ ಸಂಘದ ಆಡಳಿತಾಧಿಕಾರಿ ಒತ್ತಾಯ

ಶಶಿಧರ ಎಲ್

ಲಿಂಗಸುಗೂರು: ನಂದವಾಡಗಿ ಏತನೀರಾವರಿ ಯೋಜನೆ ವ್ಯಾಪ್ತಿ ಜಮೀನುಗಳಿಗೆ ಪೈಪ್‌ಲೈನ್ ಮೂಲಕ ಹರಿ ನೀರಾವರಿ ಒದಗಿಸಬೇಕೆಂದು ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ ಒತ್ತಾಯಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಂದವಾಡಗಿ ಏತನೀರಾವರಿ ಯೋಜನೆ ಕಾಮಗಾರಿಗೆ 2017ರ ಜೂ.14 ರಂದು ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ಚಾಲನೆ ನೀಡಿ 1800 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಟೆಂಡರ್ ಕರೆದು ಕೆಲಸ ಆರಂಭಿಸಿದ್ದರು. 2020-21 ರ ವೇಳೆಗೆ ನೀರು ಒದಗಿಸುವ ಭರವಸೆ ನೀಡಿದ್ದರು. ಕಾಮಗಾರಿ ಶೇ.90 ಪೂರ್ಣಗೊಂಡರೂ ನೀರು ಒದಗಿಸದಿರುವುದು ಬೇಸರ ತಂದಿದೆ ಎಂದರು.

ಲಿಂಗಸುಗೂರು, ಹುನಗುಂದ ಮತ್ತು ಮಸ್ಕಿ ತಾಲೂಕುಗಳ ಸುಮಾರು 1.30 ಲಕ್ಷ ಎಕರೆಗೆ ನೀರುಣಿಸುವ ಬಹುದೊಡ್ಡ ಯೋಜನೆ ನಂದವಾಡಗಿ ಏತನೀರಾವರಿ. ಇದನ್ನು ಹನಿ ನೀರಾವರಿಗೆ ಒಳಪಡಿಸಿದರೆ ವಿಫಲವಾಗುವ ಸಾಧ್ಯತೆಯಿದೆ. ಮಧ್ಯಪ್ರದೇಶ ಮಾದರಿ ಹರಿ ನೀರಾವರಿ ಯೋಜನೆಯಾಗಿ ಪರಿವರ್ತಿಸಬೇಕು. ಪ್ರತಿ ಎರಡೂವರೆ ಎಕರೆಗೆ ಒಂದರಂತೆ ತೂಬು ನೀಡಿ, ರೈತರು ನೀರು ಸಂಗ್ರಹಿಸಲು ಟ್ಯಾಂಕ್ ನಿರ್ಮಿಸಿ, ಸೋಲಾರ್ ಪಂಪ್‌ಸೆಟ್ ಒದಗಿಸಿದರೆ ಯೋಜನೆ ಕೂಡ ಯಶಸ್ವಿಯಾಗಲಿದೆ ಎಂದರು.

ನಂದವಾಡಗಿ ಯೋಜನೆ ಹೋರಾಟ ಸಮಿತಿ ಮುಖಂಡ ಎಚ್.ಬಿ.ಮುರಾರಿ ಮಾತನಾಡಿ, ಹೋರಾಟದ ಫಲವಾಗಿ ಯೋಜನೆ ಜಾರಿಗೊಂಡಿದೆ. ಆದರೆ, ಯೋಜನೆ ಕಳಪೆಯಿಂದ ಕೂಡಿದ್ದು, ಟೆಂಡರ್ ಪ್ರಕಾರ ಕಾಮಗಾರಿ ನಡೆಯುತ್ತಿಲ್ಲವೆಂದು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹನಿ ನೀರಾವರಿ ಸ್ಥಗಿತಗೊಳಿಸಬೇಕೆಂಬ ಚಿಂತನೆ ಸರ್ಕಾರದ ಮಟ್ಟದಲ್ಲಿದ್ದು, ಹರಿ ನೀರಾವರಿ ಮೂಲಕ ನೀರು ಒದಗಿಸಬೇಕೆಂದು ಒತ್ತಾಯಿಸಿದರು.

ಪ್ರಮುಖರಾದ ರಮೇಶ ಶಾಸ್ತ್ರಿ, ಶರಣಗೌಡ ಬಸ್ಸಾಪುರ, ಮಲ್ಲನಗೌಡ, ಮಹೇಶ ಅಮರಾವತಿ, ಮಲ್ಲಯ್ಯ, ಬಸವರಾಜ ಇದ್ದರು.