ವಿಜಯವಾಣಿ ಸುದ್ದಿಜಾಲ ಉಳ್ಳಾಲ
ನಿವೇಶನರಹಿತರಿಗೆ ನೀಡಲು ಜಮೀನು ಗುರುತಿಸಿ ಅಭಿವೃದ್ಧಿಪಡಿಸಲಾಗಿದೆ, ಐದು ಇಲಾಖೆಗಳ ಎನ್‌ಒಸಿ ಸಿಕ್ಕರೆ ಸಭೆ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಹರೇಕಳ ಗ್ರಾಪಂ ಉಪಾಧ್ಯಕ್ಷ ಮತ್ತು ಪಿಡಿಒ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಹರೇಕಳ ಗ್ರಾಪಂ 2025-26ನೇ ಸಾಲಿನ ಪ್ರಥಮ ಹಂತದ ಹಾಗೂ ಆಡಳಿತಾವಧಿಯ ಕೊನೆಯ ಗ್ರಾಮಸಭೆಯಲ್ಲಿ ಮಾತನಾಡಿದರು.
ಬಡವರಿಗೆ ನಿವೇಶನ ಕೇವಲ ಭರವಸೆ: ಹರೇಕಳ ಗ್ರಾಮದಲ್ಲಿ 32 ವರ್ಷಗಳಿಂದ ಬಡವರಿಗೆ ನಿವೇಶನ ಕೊಟ್ಟಿಲ್ಲ, ಕೇವಲ ಭರವಸೆ ಮಾತ್ರ ನೀಡಲಾಗುತ್ತಿದೆ. ಇಲ್ಲಿ ಮಾರಾಟ ಮಾಡಲು ಸರ್ಕಾರಿ ಜಾಗ ಇದೆ, ಆದರೆ ಬಡವರಿಗೆ ಕೊಡಲು ಇಲ್ಲ. ಇನ್ನೆಷ್ಟು ವರ್ಷ ಕಾಯಬೇಕು ಎಂದು ಉಮರಬ್ಬ ಎಂಬುವರ ಪ್ರಶ್ನೆಗೆ ಗ್ರಾಮಸ್ಥರು ಧ್ವನಿಗೂಡಿಸಿದರು.
ನಿವೇಶನರಹಿತರ ಪಟ್ಟಿ ಅಂತಿಮಗೊಳಿಸಿ ತಹಸೀಲ್ದಾರ್‌ಗೆ ಕಳುಹಿಸಲಾಗಿದೆ. ಗುರುತಿಸಿದ ಜಾಗ ಸರ್ವೇ ಮಾಡಿಸಿ ಮುಡಾಕ್ಕೆ ಕಳಿಸಲಾಗಿದ್ದು ಎರಡು ಲಕ್ಷ ಶುಲ್ಕ ಪಾವತಿಸುವಂತೆ ತಿಳಿಸಲಾಗಿದೆ. ಬಡವರಿಗೆ ಕೊಡುವ ಜಾಗ ಆಗಿರುವುದರಿಂದ ಮನ್ನಾ ಮಾಡುವಂತೆ ಗ್ರಾಪಂನಿಂದ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು. ಚರಂಡಿ, ರಸ್ತೆ ವ್ಯವಸ್ಥೆ ಮಾಡಲಾಗುತ್ತಿದ್ದು ಮುಡಾದಿಂದ ಅನುಮತಿ ಸಿಕ್ಕಿದೆ. ಮೆಸ್ಕಾಂ, ಅಗ್ನಿಶಾಮಕ, ಜಲಮಂಡಳಿ, ಗಣಿ ಮತ್ತು ಭೂಮಂಡಳಿಯಿಂದ ಎನ್‌ಒಸಿ ಪಡೆಯಬೇಕಿದೆ ಎಂದು ಪಿಡಿಒ ಮುತ್ತಪ್ಪ ಮಾಹಿತಿ ನೀಡಿದರು.
ನಿವೇಶನ ನೀಡಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ತಹಸೀಲ್ದಾರ್ ಹಕ್ಕುಪತ್ರ ಸಹಿತ ನಿವೇಶನ ನೀಡಲಿದ್ದಾರೆ. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ನಮ್ಮಲ್ಲಿದ್ದು ಮಾಹಿತಿ ಹಕ್ಕಿನಲ್ಲಿ ಕೇಳಿದರೆ ನೀಡಲಾಗುವುದು. ಐದು ಇಲಾಖೆಯವರು ಎನ್‌ಒಸಿ ಕೊಟ್ಟರೆ ನಿವೇಶನ ನೀಡುವ ಕೆಲಸ ಮಾಡುತ್ತೇವೆ ಎಂದು ಉಪಾಧ್ಯಕ್ಷ ಅಬ್ದುಲ್ ಮಜೀದ್ ತಿಳಿಸಿದರು.
ಜನನ-ಮರಣ ಪತ್ರಕ್ಕೆ ಅಲೆದಾಟ: ಜನನ ಮರಣ ಪ್ರಮಾಣಪತ್ರಕ್ಕಾಗಿ ತಿಂಗಳವರೆಗೆ ಗ್ರಾಪಂ ನೋಂದಣಿ ಮಾಡಬೇಕು, ಒಂದು ವರ್ಷವಾದರೆ ಕಂದಾಯ ಇಲಾಖೆಯಲ್ಲಿ ವರ್ಷ ಮೇಲ್ಪಟ್ಟರೆ ನ್ಯಾಯಾಲಯದ ಮೂಲಕ ನೋಂದಣಿ ಮಾಡಿ ಪ್ರಮಾಣಪತ್ರ ಪಡೆಯಬೇಕು ಎಂದು ಗ್ರಾಮಕರಣಿಕ ಮನೋಹರ ಮಾಹಿತಿ ನೀಡಿದರು.
ಗ್ರಾಪಂ ಅಧ್ಯಕ್ಷೆ ಗುಲಾಬಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್ ನೋಡೆಲ್ ಅಧಿಕಾರಿಯಾಗಿದ್ದರು. ಉಪಾಧ್ಯಕ್ಷ ಅಬ್ದುಲ್ ಮಜೀದ್ ಎಂ.ಪಿ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೆಸ್ಕಾಂ ಇಲಾಖೆ, ತೋಟಗಾರಿಕಾ ಇಲಾಖೆ, ಕಂದಾಯ ಇಲಾಖೆ, ತಾಪಂ ಐಇಸಿ ವಿಭಾಗ, ಆರೋಗ್ಯ ಇಲಾಖೆ ಅಧಿಕಾರಿಗಳು, ಮಾಜಿ ಅಧ್ಯಕ್ಷರಾದ ಬದ್ರುದ್ದೀನ್ ಫರೀದ್ ನಗರ, ಅನಿತಾ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು. ಪಿಡಿಒ ಮುತ್ತಪ್ಪ ಡಿ. ಸ್ವಾಗತಿಸಿದರು. ಕಾರ್ಯದರ್ಶಿ ಕೆ.ತಾರಾಕ್ಷಿ ವರದಿ ವಾಚಿಸಿದರು.
ಮೆಸ್ಕಾಂ ವಿರುದ್ಧ ದೂರು
ಸಹಾಯವಾಣಿಗೆ ಕರೆ ಮಾಡಿದರೆ ಸ್ವೀಕರಿಸಿ ರಿಸೀವರ್ ಕೆಳಗೆ ಇಟ್ಟು ಬಿಡುತ್ತಾರೆ ಎಂದು ಗ್ರಾಮಸ್ಥರು ದೂರಿದರು. ಗ್ರಾಮಸ್ಥರ ಕರೆಗೆ ಮೆಸ್ಕಾಂ ಇಲಾಖೆಯವರು ಸ್ವೀಕರಿಸದಿರುವುದು ಸರಿಯಲ್ಲ, ಮುಂದಿನ ದಿನಗಳಲ್ಲಿ ಇಂಥ ಪ್ರಕರಣ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ನೋಡೆಲ್ ಅಧಿಕಾರಿ ನಡಾವಳಿಯಲ್ಲಿ ಬರೆಸಿದರು.
ಮರದ ಕಂಬದಲ್ಲಿ ದೀಪ ಅಳವಡಿಕೆ
ಒಂದನೇ ವಾರ್ಡ್‌ನಲ್ಲಿ ಹಿಂದೆ ಮರದ ಕಂಬ ಹಾಕಿ ದೀಪ ಹಾಕಲಾಗಿದ್ದು ಈಗ ತುಂಡಾಗಿ ದೀಪವೇ ಇಲ್ಲ ಎಂದು ಸ್ಥಳೀಯರು ಮೆಸ್ಕಾಂ ಅಧಿಕಾರಿ ಬಳಿ ಅಸಮಾಧಾನ ವ್ಯಕ್ತಪಡಿಸಿದರು. ನಾಳೆಯೇ ಮಾಡಿಕೊಡಿ ಎಂದು ನೋಡೆಲ್ ಅಧಿಕಾರಿ ಭರವಸೆ ನೀಡಿದಾಗ ಮೆಸ್ಕಾಂ ಅಧಿಕಾರಿ ಒಪ್ಪಿದರು. ಆಕ್ಷೇಪ ವ್ಯಕ್ತಪಡಿಸಿದ ಬದ್ರುದ್ದೀನ್, ನೀವು ಈಗಾಗಲೇ ವರ್ಗಾವಣೆ ಆಗಿದ್ದು ಭರವಸೆ ಕೊಟ್ಟು ಹೋಗಬೇಡಿ. ನಾವು ಕಳೆದ ಬಾರಿಯೇ ಎಸ್ಟಿಮೇಟ್ ಮಾಡಿದ್ದು, ಪಂಚಾಯಿತಿಯಿಂದ ಒಂದು ಲಕ್ಷ ಕಟ್ಟಿ ಎಂದು ನೀವು ಹೇಳಿದರೆ ಆಗದು. ನೀವು ಮೊದಲು ಕಂಬ ಹಾಕಿಕೊಡಿ, ಮುಕ್ಕಾಲು ಕಂಬ ಆದರೂ ಆಗಬಹುದು. ದೀಪದ ವ್ಯವಸ್ಥೆ ನಾವು ಮಾಡಿಕೊಳ್ಳುತ್ತೇವೆ ಎಂದರು.
90ನಿಮಿಷದಲ್ಲೇ ಸಭೆ ಫಿಸಿಶ್!
ಹರೇಕಳ ಗ್ರಾಪಂ ಗ್ರಾಮ ಸಭೆಯಲ್ಲಿ ಪ್ರತಿಬಾರಿ ನಿವೇಶನ ಹಾಗೂ ಇತರ ವಿಚಾರವಾಗಿಯೇ ಹಲವು ಗಂಟೆ ಸಭೆ ನಡೆಯುವುದು, ವಾದ ಪ್ರತಿವಾದ ಸಾಮಾನ್ಯ. ಆದರೆ ಮಂಗಳವಾರ ನಡೆದ ಹಾಲಿ ಆಡಳಿತ ಕೊನೆಯ ಗ್ರಾಮ ಸಭೆಯಲ್ಲಿ ನಿವೇಶನದ ಬಗ್ಗೆ ಹಾಗೂ ವಿದ್ಯುತ್ ಕಂಬದ ಬಗ್ಗೆ ಹತ್ತು ನಿಮಿಷ ಚರ್ಚೆ ನಡೆಯಿತು. ಪ್ರತಿ ಹಂತದಲ್ಲೂ ಸಭೆಯನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದ ನೋಡೆಲ್ ಅಧಿಕಾರಿ ಈಶ್ವರ್ ಅವರು, ಒಂದೂವರೆ ಗಂಟೆಯ ಅಂತರದಲ್ಲೇ ಗ್ರಾಮಸ್ಥರು, ಅಧಿಕಾರಿಗಳಿಗೆ ವಂದನೆ ಸಲ್ಲಿಸಿ ರಾಷ್ಟ್ರಗೀತೆಯ ಮೂಲಕ ಸಭೆ ಮುಗಿಸಿ ಸುದೀರ್ಘ ಸಮಯ ತೆಗೆದುಕೊಳ್ಳುವುದನ್ನು ತಪ್ಪಿಸಿದರು.